ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಮಾರ್ಚ್ 28, 2019

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲ !! | ಟಾಂಗ್-ಕಿಂಗ್ (ಲೇಖನ) 2


ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಳೆದ ಕೆಲವು ವರುಷಗಳಿಂದ ಪ್ರಯಾಣಿಕರ ನಿರಂತರ ಧನಾತ್ಮಕ ವೃದ್ಧಿಯಿಂದ ಹೆಸರುಗಳಿಸಿದೆ.




ಆದರೆ ಈಗ ಮಂಗಳೂರಿನಲ್ಲಿ ವೈಮಾನಿಕ ಪ್ರಯಾಣಿಕರ ಸಂಖ್ಯೆ ಕುಗ್ಗುತ್ತಿದೆ. ಆದರೇ ಇದೇನು ದಿಢೀರ್ ಬದಲಾವಣೆಯಲ್ಲ, ಭವಿಷ್ಯದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿಪ್ರಯಾಣಿಕರ ಸಂಖ್ಯೆ ಇಳಿಮುಖವಾಗುವುದೆಂದು ಕಳೆದ ಕೆಲವು ವರುಷಗಳಿಂದಲೇ ಅಂದಾಜಿಸಲಾಗುತಿತ್ತು. ಈ ಸಂದೇಹವನ್ನು ಹುಟ್ಟು ಹಾಕಲು ಮುಖ್ಯ ಕಾರಣಾವಾಗಿದ್ದು ಕೇರಳ ರಾಜ್ಯದ ಕಣ್ಣೂರು ಎಂಬ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಾಣಗೊಳ್ಳಲಾರಂಭಿಸಿದ ಕೇರಳದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

ಹೌದು, ತಿರುವನಂತಪುರಂ, ಕೊಚ್ಚಿ,ಕಲ್ಲಿಕೋಟೆ ನಂತರ ಕಣ್ಣೂರು ಕೇರಳದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರ. (ಕರ್ನಾಟಕದಲ್ಲಿ ಬೆಂಗಳೂರು ಹೊರತು ಪಡಿಸಿದರೆ ಮಂಗಳೂರು ಮಾತ್ರ) ಆದರೆ ಇದರಿಂದ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಏನು ತೊಂದರೆ ಎಂದು ಕೇಳುವುದಾದರೆ ಕಣ್ಣೂರು ಇರುವುದು ಮಂಗಳೂರಿನಿಂದ ಬರೇ ೧೪೩ ಕಿ.ಮೀ. ದೂರದಲ್ಲಿ. ಈ ಮೊದಲು ಮಂಗಳೂರು ವಿಮಾನ ನಿಲ್ದಾಣ ಬರೀ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮಾತ್ರವಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಕಾಸರಗೋಡು ಹಾಗು ಕೇರಳದ ಉತ್ತರ ಭಾಗದ ಜಿಲ್ಲೆಯ ಪ್ರಯಾಣಿಕರಿಗೂ ಆಸರೆಯಾಗಿತ್ತು. ಆದರೆ ನೂತನ ಕಣ್ಣೂರು ವಿಮಾನ ನಿಲ್ದಾಣದವು ಕೊಡಗು ಹಾಗು ಕಾಸರಗೋಡು ಜಿಲ್ಲೆಗಳಿಗೆ ಸಮೀಪದಲ್ಲಿರುವುದರಿಂದ ಈ ಜಿಲ್ಲೆಯ ಪ್ರಯಾಣಿಕರು ಕಣ್ಣೂರಿನ ಕಡೆಗೆ ಆಕರ್ಷಿತರಾಗೋದು ಸರ್ವೇ ಸಾಮಾನ್ಯ. ಮಾತ್ರವಲ್ಲದೆ ಕಣ್ಣೂರಿನ ವಿಮಾನ ನಿಲ್ದಾಣದ ಓಟದಾರಿ (ರನ್ ವೇ) ಮಂಗಳೂರಿನ ನಿಲ್ದಾಣಕ್ಕಿಂತ ಬರೋಬ್ಬರಿ ೧೦೦೦ ಮೀಟರ್ ಉದ್ದವಿದೆ (ಒಟ್ಟು ಉದ್ದ ೩೫೦೦ ಮೀ) ಹೀಗಾಗಿ ಇಲ್ಲಿ ವಿದೇಶಿ ವೈಮಾನಿಕ ಸಂಸ್ಥೆಗಳು ಪ್ರಯಾಣಕ್ಕಾಗಿ ಹಾತೊರೆಯುತ್ತಿವೆ. ಮಂಗಳೂರಿನ ಟೇಬಲ್ ಟಾಪ್ ರನ್ ವೇ ಉದ್ದ ಬರೇ ೨೪೫೦ ಮೀಟರ್ ಗಳಿಗೆ ಸೀಮಿತವಾಗಿರಿರುವುದರಿಂದ ವಿದೇಶಿ ವಿಮಾನಗಳು ಈ ಕಡೆ ತಲೆನೂ ಹಾಕುತ್ತಿಲ್ಲ. (ಮಂಗಳೂರಿನಿಂದ ಹಾರಾಟ ನಡೆಸುತ್ತಿರುವ ಅಂತಾರಾಷ್ಟ್ರೀಯ ವಿಮಾನಗಳು ಭಾರತೀಯ ಮೂಲದವೇ ಆಗಿವೆ.)

ಅಂತೂ ಡಿಸೆಂಬರ್ ೦೯, ೨೦೧೮ ರಂದು ಕಣ್ಣೂರು ವಿಮಾನ ನಿಲ್ದಾಣ ಉದ್ಘಾಟನೆಯಾಗಿ ಲೋಕಾರ್ಪಣೆಗೊಂಡಿತು. ಕಳೆದ ಮೂರು ತಿಂಗಳಲ್ಲಿ ಕಣ್ಣೂರಿನಲ್ಲಿ ವಿಮಾನಗಳ ಹಾರಾಟ ಸಂಖ್ಯೆ ವೃದ್ಧಿಯಾಗುತ್ತಲೇ ಬರುತ್ತಿದೆ. ಅದಕ್ಕೆ ಪೂರಕವಾಗಿ ಕಳೆದ ಮೂರು ತಿಂಗಳಲ್ಲಿ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗುತ್ತಿದೆ.

ಹಾಗಾದರೆ ಊಹೆ/ಅನುಮಾನ/ನುಡಿದ ಭವಿಷ್ಯ ನಿಜವಾಯಿತೇ? ಕಣ್ಣೂರು ವಿಮಾನ ನಿಲ್ದಾಣ ಉದ್ಘಾಟನೆಯಿಂದ ಮಂಗಳೂರು ನಿಲ್ದಾಣಕ್ಕೆ ಪೆಟ್ಟು ಬಿತ್ತೇ?

ಇಲ್ಲ, ಇದ್ಯಾವುದು ನಿಜವಲ್ಲ,

ಒಂದು ಬಾರಿ ಈ ಕೆಳಗಿನ ವಿಷಯಗಳನ್ನು ಪರಿಗಣಿಸಿ.

೧. ದೂರ :

ಕಾಸರಗೋಡು ಹಾಗು ಮಡಿಕೇರಿ (ಕೊಡಗು) ಜನರಿಗೆ ಈ ಎರಡು ವಿಮಾನ ನಿಲ್ದಾಣಗಳು ಎಷ್ಟು ದೂರದಲ್ಲಿವೆ ಎಂದು ಪರಿಶೀಲಿಸೋಣ.


ಅ) ಕಾಸರಗೋಡು-ಮಂಗಳೂರು


ಕಾಸರಗೋಡು ನಿಂದ ಮಂಗಳೂರು ೫೯ ಕಿ.ಮೀ. (ಸಮಯ ೧ ಘಂಟೆ ೩೦ ನಿಮಿಷಗಳು)


ಆ) ಕಾಸರಗೋಡು - ಕಣ್ಣೂರು



ಕಾಸರಗೋಡು ನಿಂದ ಕಣ್ಣೂರು ೧೧೨ ಕಿ.ಮೀ. (ಸಮಯ ೩ ಘಂಟೆ ೧೦ ನಿಮಿಷಗಳು)


ಕಾಸರಗೋಡಿ ನಿಂದ  ಕಣ್ಣೂರು , ಮಂಗಳೂರಿಗಿಂತ ಬರೋಬರಿ ಎರಡು ಪಟ್ಟು ದೂರದಲ್ಲಿದೆ.
ಸ್ವತಃ ಕಣ್ಣೂರು ನಗರದಿಂದ ಕಣ್ಣೂರು ವಿಮಾನ ನಿಲ್ದಾಣ ಸುಮಾರು ೨೭ ಕಿ. ಮೀ. ದೂರದಲ್ಲಿದೆ. ಕಾಸರಗೋಡು ಜಿಲ್ಲೆಯ ದಕ್ಷಿಣ ತುತ್ತ ತುದಿಯಿಂದಲೂ ಮಂಗಳೂರೇ ಸಮೀಪ. ಹೀಗಾಗಿ ದುಬೈ ಹಾಗು ಇತರೆ ಗಲ್ಫ್ ರಾಷ್ಟ್ರಗಳಿಗೆ ಹೋಗುವ ಕಾಸರಗೋಡಿನ ಪ್ರಯಾಣಿಕರು ಕಣ್ಣುರಿನೆಡೆಗೆ ಮುಖಮಾಡುತ್ತಾರೆ ಎಂಬ ಊಹಾ ಪೋಹಾ ವನ್ನು ಸುಲಭವಾಗಿ ತಳ್ಳಿ ಹಾಕಬಹುದು.


ಈಗ ಕೊಡಗು ಜಿಲ್ಲೆ ನೋಡೋಣ.

ಇ) ಮಡಿಕೇರಿ-ಮಂಗಳೂರು



     ಮಡಿಕೇರಿ (ಕೊಡಗು)-ಮಂಗಳೂರು ೧೪೪ ಕಿ.ಮೀ. (ಸಮಯ ೩ ಘಂಟೆ ೨೩ ನಿಮಿಷಗಳು)


ಈ) ಮಡಿಕೇರಿ-ಕಣ್ಣೂರು



            ಮಡಿಕೇರಿ(ಕೊಡಗು)-ಕಣ್ಣೂರು ೯೦ ಕಿ.ಮೀ (ಸಮಯ ೨ ಘಂಟೆ ೩೩ ನಿಮಿಷಗಳು)

ಮಡಿಕೇರಿ ಜನರಿಗೆ ಕಣ್ಣೂರು ವಿಮಾನ ನಿಲ್ದಾಣ ಮಂಗಳೂರಿಗಿಂತ ಹೆಚ್ಚು ಸಮೀಪ. ಕೊಡಗಿನ ಮತ್ತೊಂದು ನಗರ ವಿರಾಜಪೇಟೆಯಿಂದ ಕಣ್ಣೂರು ಬರೇ ೬೦ ಕಿ.ಮೀ. ದೂರದಲ್ಲಿ ಇದೆ. ಹಾಗಾಗಿ ಇಲ್ಲಿನ ಜನರು ಮಂಗಳೂರಿಗೆ ಬರುವ ಸುಮಾರು ಒಂದರಿಂದ ಎರಡು ತಾಸಿನಷ್ಟು ಸಮಯವನ್ನು ಉಳಿಸಬಹುದಾಗಿದೆ. ಮಾತ್ರವಲ್ಲದೆ ಕಣ್ಣೂರು ವಿಮಾನ ನಿಲ್ದಾಣದಿಂದ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ದಲ್ಲಿಯೂ ಬೆಳವಣಿಗೆಯಾಗುವ ಸಾಧ್ಯತೆಗಳಿವೆ.


) ವಿಮಾನಯಾನ ತಾಣಗಳು

ಇನ್ನು ಈ ಎರಡು ವಿಮಾನ ನಿಲ್ದಾಣಗಳು ಯಾವೆಲ್ಲ ಜಾಗಗಳಿಗೆ ಪ್ರಯಾಣ ಕಲ್ಪಿಸಿ ಕೊಡುತ್ತವೆ ಎಂದು ನೋಡೋಣ.

ಮಂಗಳೂರಿನ ವಿಮಾನಯಾನ ತಾಣಗಳು



ಕಣ್ಣೂರಿನ ವಿಮಾನಯಾನ ತಾಣಗಳು:




ಕಣ್ಣೂರು ಹಾಗು ಮಂಗಳೂರಿನಿಂದ ವಿಮಾನಗಳು ಹೆಚ್ಚು ಕಮ್ಮಿ ಸಮನಾದ ಜಾಗಗಳಿಗೆ ಪ್ರಯಾಣಿಸುತ್ತಿವೆ. ಸ್ಪಷ್ಟವಾಗಿ ಕಣ್ಣೂರಿನಿಂದ ವಿಮಾನಗಳು ಇನ್ನು ಪೂರ್ಣಗತಿಯಲ್ಲಿ ಪ್ರಾರಂಭವಾಗಿಲ್ಲ, ಅದಕ್ಕಿನ್ನೂ ಮೂರು ತಿಂಗಳು ಹೆಚ್ಚು ಸಮಯ ಬೇಕಾಗುವುದು.

ಹಾಗಾದರೆ ಮಂಗಳೂರಿನಲ್ಲಿ ಪ್ರಯಾಣಿಕರ ಇಳಿಮುಖಕ್ಕೆ ಕಾರಣವೇನು?

ಅದಕುತ್ತರ , ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಭಾರತದ ಜೆಟ್ ಏರ್ವೇಸ್ (Jet Airways) ವಿಮಾನ ಸಂಸ್ಥೆ.
ಹೌದು, ಕಳೆದ ವರ್ಷದ ಅಂಕಿ ಅಂಶಗಳ ಪ್ರಕಾರ ಮಂಗಳೂರಿನಿಂದ ಪ್ರತಿದಿನ ಜೆಟ್ ಏರ್ವೇಸ್ ನ ವಿಮಾನಗಳು ಮುಂಬೈ ಕಡೆಗೆ , ವಿಮಾನಗಳು ಬೆಂಗಳೂರಿನೆಡೆಗೆ ಹಾಗು ತಲಾ ೧ ವಿಮಾನ ದೆಹಲಿ, ದುಬೈ ಶಾರ್ಜಾ, ಹಾಗು ಅಬುದಾಬಿ ಕಡೆಗೆ ಪ್ರಯಾಣಿಸುತಿದ್ದವು. ಮಂಗಳೂರಿನಲ್ಲಿ   ಜೆಟ್ ಏರ್ವೇಸ್ ವಿಮಾನಗಳದ್ದೇ  ಮೇಲುಗೈ ಇತ್ತು. ಆದರೆ ಈಗ ಜೆಟ್ ಏರ್ವೇಸ್ ಸಂಸ್ಥೆಯ ಆರ್ಥಿಕ ಬಿಕ್ಕಟ್ಟಿನಿಂದ ಮಂಗಳೂರಿನ ಕಡೆ ಹಾರಾಟ ನಡೆಸುತ್ತಿದ್ದ ಎಲ್ಲಾ ಜೆಟ್ ಏರ್ವೇಸ್ ವಿಮಾನಗಳು ಒಂದರ ನಂತರ ಒಂದರಂತೆ ಸ್ಥಗಿತಗೊಂಡಿವೆ. (ಮೇಲಿನ ಮಂಗಳೂರಿನ ವಿಮಾನಯಾನ ತಾಣಗಳ ಪಟ್ಟಿಯಲ್ಲಿ ನೀವು ಗಮನಿಸಬಹುದು.) ದಿನಂಪ್ರತಿ ಇಲ್ಲಿ ೫೮ ವಿಮಾನಗಳು ಓಡಾಟ ನಡೆಸುತಿದ್ದವು ಆದರೆ ಈಗ ಈ ಸಂಖ್ಯೆ ೨೫ ಕ್ಕೆ ಕುಸಿದಿದೆ. ಇದರ ಬದಲಾಗಿ ಬೇರೆ ವಿಮಾನ ಸಂಸ್ಥೆಗಳು ಮಂಗಳೂರಿಗೆ ತಮ್ಮ ವಿಮಾನಗಳ ಸಂಖ್ಯೆಯನ್ನೇನು ಹೆಚ್ಚಿಸಿಲ್ಲ. ಹೀಗಾಗಿ ಕಳೆದ ಒಂದು ತಿಂಗಳಲ್ಲಿ ಮಂಗಳೂರಿನಲ್ಲಿ ಪ್ರಯಾಣಿಕರ ಸಂಖ್ಯೆ ಶೇಕಡಾ ೩೦ ರಷ್ಟು ಕುಗ್ಗಿದೆ. ಅಲ್ಲ ಸ್ವಾಮಿ ವಿಮಾನಗೆಳೆ ಇಲ್ಲದ ಮೇಲೆ ಜನರು ಪ್ರಯಾಣಿಸುವುದಾದರು ಹೇಗೆ ಹೇಳಿ?

ಜೆಟ್ ಏರ್ವೇಸ್ ಸಂಸ್ಥೆ ತನ್ನ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವ ನೀರಿಕ್ಷೆಯಲ್ಲಿದೆ. ಹೀಗಾಗಿ ತನ್ನ ವಿಮಾನಗಳನ್ನು ಪುನಃ ಹಿಂದಿನಂತೆಯೇ ಚಲಾಯಿಸಲು ಮೇ ತಿಂಗಳಿನ ಗಡುವು ತೆಗೆದುಕೊಂಡಿದೆ. ಹೀಗಾದರೆ ಮತ್ತೆ ಮಂಗಳೂರಿನಲ್ಲಿ ಮೊದಲಿನ ಹಾಗೆ ವಿಮಾನಗಳ ಸಂಖ್ಯೆ ದಿನಂಪ್ರತಿ ೫೦ ಮೀರಲಿದೆ ಹಾಗು ಪ್ರಯಾಣಿಕರ ಸಂಚಾರದಲ್ಲೂ ವೃದ್ಧಿಯಾಗಲಿದೆ.

ಇತ್ತೀಚಿನ ಬೆಳೆವಣಿಗೆಗಳ ಪ್ರಕಾರ ವಿಮಾನ ನಿಲ್ದಾಣಗಳನ್ನು ಖಾಸಗಿಕರಣ ಗೊಳಿಸುವ ನಿಟ್ಟಿನಲ್ಲಿ ಮಂಗಳೂರು ವಿಮಾನ ನಿಲ್ದಾಣವನ್ನು ಈಗಾಗಲೇ ಅದಾನಿ ಸಂಸ್ಥೆ ಬಿಡ್ಡಿಂಗ್ ನಲ್ಲಿ ಗೆದ್ದು ಕೊಂಡಿದೆ. ಮಂಗಳೂರಿನ ವಿಮಾನ ನಿಲ್ದಾಣ ಖಾಸಗೀಕರಣಗೊಂಡರೆ ಸ್ವಲ್ಪ ಹೆಚ್ಚುವರಿ ಅಭಿವೃದ್ಧಿಯನ್ನು ನಾವು ಕಾಣಬಹುದಾಗಿದೆ. ಆದರೆ ವಿಮಾನ ನಿಲ್ದಾಣದ ರನ್ ವೇ ಉದ್ದಪಡಿಸುವ ವಿಚಾರ ಮಾತ್ರ ಇನ್ನೂ "ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವವರಾರು?" ಎಂಬಂತೆ ಉಳಿದು ಬಿಟ್ಟಿದೆ. ರನ್ ವೇ ಉದ್ದಗೊಂಡರೆ ಭವಿಷ್ಯದಲ್ಲಿ ಐರೋಪ್ಯ ರಾಷ್ಟ್ರಗಳಿಗೂ ಮಂಗಳೂರಿನಿಂದಲೇ ಪ್ರಯಾಣ ಬೆಳೆಸಬಹುದಾಗಿದೆ. (ಅದಕ್ಕಾಗಿ ಈಗ ಮಂಗಳೂರಿಗರು ಬೆಂಗಳೂರನ್ನು ಅವಲಂಬಿಸಿದ್ದಾರೆ) ಹೀಗಾದರೆ ಮಾತ್ರ ಮಂಗಳೂರು ಕಣ್ಣೂರಿನ ವಿಮಾನ ನಿಲ್ದಾಣಕ್ಕೆ ಸೆಡ್ಡು ಹೊಡೆದು ನಿಲ್ಲಲು ಸಾಧ್ಯ . ಇಲ್ಲದಿದ್ದರೆ ಕಣ್ಣೂರು ಐರೋಪ್ಯ ರಾಷ್ಟ್ರಗಳಿಗೆ ಸಂಪರ್ಕ ಒದಗಿಸಿ ಸ್ವತಃ ಮಂಗಳೂರಿಗರನ್ನೇ ಆಕರ್ಷಿಸಿದರೆ ಆಶ್ಚರ್ಯವೇನಿಲ್ಲ.

ಬುಧವಾರ, ಅಕ್ಟೋಬರ್ 12, 2016

“ಪ್ರಕೃತಿಯೇ ಮೂಲ, ಪ್ರಕೃತಿಯೇ ಅಂತ್ಯ” – ನಿಖರ ಮಾತು 1


ಈ ಆಧುನಿಕ ಯುಗದಲ್ಲಿ ಉತ್ತಮವಾದ ತಂತ್ರಜ್ನಾನಗಳನ್ನು ಬಳಸುತ್ತಾ ಎಲ್ಲಾ ಭೂಜೀವಿಗಳಿಗಿಂತಲೂ ಬುದ್ದಿಶಾಲಿ ಜೀವಿ “ಮಾನವ” ಎಂದುಕೊಳ್ಳುವಷ್ಟು ಮುಂದುವರೆದಿದ್ದೇವೆ. ಆದರೆ ಈ ಎಲ್ಲಾ ಜ್ಞಾನ, ಬುದ್ದಿಶಾಲಿತನದ ಮೂಲವು ಯಾವುದೆಂದು ಸ್ವಲ್ಪ ಯೋಚಿಸಬೇಕಾಗಿದೆ. ನಾವು ಇದನ್ನು ಮರೆತಿದ್ದೇವೆ. ನಮಗೆ ತಿಳಿಯದಂತೆ ಈ ಮೂಲವನ್ನು ನಾಶಮಾಡಿಕೊಂಡು ಬಂದಿದ್ದೇವೆ. ಅದೇ ಈ ಸುಂದರವಾದ “ಪ್ರಕೃತಿ”. ಎಲ್ಲಾ ವಿಷಯಗಳಿಗೂ, ತಂತ್ರಜ್ಞಾನಗಳಿಗೂ ಹಾಗು ನಾವು ಬದುಕಲು ರೂಡಿಸಿಕೊಂಡು ಬಂದಂತಹ ಪ್ರತಿ ಉದ್ಯೋಗವು ಕೂಡ ಇದೆ ನಿಸರ್ಗದ ಕಾಣಿಕೆಯಾಗಿದೆ. ಬನ್ನಿ ಒಮ್ಮೆ ಪ್ರಕೃತಿಯೊಳಗೆ ನಮ್ಮ ಚಿಂತನೆಯನ್ನು ಹರಿಸುವ.

ಮಾನವನು ಈ ಪ್ರಕೃತಿಯನ್ನು ನೋಡುತ್ತಾ ಬೆಳೆಯುತ್ತಾ ಬಂದಿರುವನು ಹಾಗೆ ಈತನ ಮೆದುಳು ಅದ್ಭುತ ಯೋಚನಾಶಕ್ತಿಯ ಆಗರವಾಗಿದ್ದು ಈ ಪರಿಸರವನ್ನು ಬಗೆಬಗೆಯಿಂದ ನೋಡುಲಾರಂಬಿಸಿದನು. ಈ ಪರಿಸರವನ್ನು ನೋಡಿ ಆನಂದಿಸಿದನು. ಅಲ್ಲದೆ ಈ ಆನಂದವನ್ನು ಅದ್ಭುತವಾಗಿ ವರ್ಣಿಸಲಾರಂಬಿಸಿದ, ಈತನು “ಕವಿ”ಯಾದ. ಈ ಸೌಂದರ್ಯವನ್ನ ಚಿತ್ರದ ಮೂಲಕ ಮೂಡಿಸಿ “ಕಲಾವಿದ”ನಾದನು. ಹೀಗೆ ಹೋಗುತ್ತಾ ಕ್ರಮೇಣ ಪ್ರಕೃತಿಯ ವಿಚಿತ್ರ ಸಂಗತಿಗಳನ್ನ ನೋಡಿ “ಇದು ಏಕೆ? ಅದು ಹೇಗೆ?” ಎನ್ನುತ್ತಾ ತನ್ನಲ್ಲಿ ಹಲವಾರು ಪ್ರಶ್ನೆಗಳನ್ನ ಕೇಳಲಾಂಬಿಸಿದನು. ಈತನ ಪ್ರಶ್ನೆಗಳು ಈತನನ್ನು ಸಂಶೋಧನೆಯಲ್ಲಿ ತೊಡಗುವಂತೆ ಮಾಡಿತು. ಈತ “ವಿಜ್ಞಾನಿ” ಎಂದು ಎನಿಸಿಕೊಂಡ. ಅದ್ಭುತವಾದ ಸಂಶೋಧನೆಯಿಂದ ಹಲವಾರು ರಹಸ್ಯಗಳನ್ನು ಭೇದಿಸಲು ಆರಂಭಿಸಿದ.

ಮುಂದುವರೆಯುತ್ತ ಮಾನವನು ಈ ನಿಸರ್ಗವನ್ನು ಬೆಳೆಸುವುದನ್ನು ಚೆನ್ನಾಗಿ ಕಲಿತ, ತನ್ನ ಹೊಟ್ಟೆಪಾಡಿಗಾಗಿ ಆಹಾರ ಪದಾರ್ಥಗಳನ್ನು, ಸಸ್ಯಗಳನ್ನು ಬೆಳೆಸುವುದಲ್ಲದೆ ಪ್ರಾಣಿಗಳ ಸಾಕಣೆಯಲಲ್ಲಿಯು ನಿಪುಣನಾಗಿ “ರೈತ” ಎಂದು ಹೇಳಲ್ಪಟ್ಟನು. ವಾಸಕ್ಕಾಗಿ ಮರದ ಸಲಕರಣೆಗಳ ಮಾಡಿ “ಕಮ್ಮಾರ”ನೂ, ದೇಹ ರಕ್ಷಣೆಯ ಸಲುವಾಗಿ ಚರ್ಮದ ತೊಡುಗೆಗಳನ್ನ ಮಾಡಿ “ಚಮ್ಮಾರ”ನಾಗಿಯೂ, ಕಲ್ಲಿನ ಮೂರ್ತಿಗಳ ಮಾಡಿ “ಶಿಲ್ಪಿ”ಯಾಗಿ ಬೆಳೆದು ನಿಂತನು. ಹೀಗೆ ಹಲವಾರು ಬದಲಾವಣೆಗಳನ್ನು ತಂದುಕೊಂಡ ಮಾನವ ತಂತ್ರಜ್ಞಾನವನ್ನು ಇಲ್ಲಿಯವರೆಗೆ ತರಲು ಯಶಸ್ವಿಯಾದ. ಸ್ನೇಹಿತರೇ, ಇದಕ್ಕೆಲ್ಲವೆ ಈ ಪ್ರಕೃತಿಯೇ ಕಾರಣವೆಂದು ಅನುಸುತಿಲ್ಲವೇ? ಈ ನಿಸರ್ಗದಿಂದಲೇ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಔಷಧೀಯ ಮೂಲವನ್ನು ತೋರಿಸಿಕೊಟ್ಟ “ಮಹರ್ಷಿ ಪತಂಜಲಿ”ಯವರು ಆಯುರ್ವೇದದ ಪಿತಾಮಹವೆಂದಿಸಿಕೊಂಡರು. ಪ್ರತೀ ಪುರಾಣಗಳಲ್ಲೂ ಈ ಪ್ರಕೃತಿ ಮಹತ್ವಪೂರ್ಣವಾದ ಪಾತ್ರವಹಿಸುತ್ತದೆ. ನೀವು ಕೂಡ ಯಾವುದೇ ವಿಷಯ ಅಥವಾ ಉದ್ಯೋಗವನ್ನೆ ನೆನೆದು ಅದರ ಮೂಲವ ಹುಡುಕಲು ಪ್ರಯತ್ನಿಸಿ, ಅದು ಈ ಪ್ರಕೃತಿದೇವಿಯ ಮಡಿಲಿಗೆ ಕೊನೆಯಲಿ ತಲುಪುದು.

ಈ ಪ್ರಕೃತಿಯಲ್ಲಿ ದೊರಕದ ವಿಷಯಗಳಿಲ್ಲ, ಎಲ್ಲಾ ಪ್ರಶ್ನೆಗೂ ಉತ್ತರ ಇಲ್ಲೇ ದೊರಕುವುದು.ಇಷ್ಟೆಲ್ಲ ಮಹತ್ವವೆಂದೆನಿಸಿಕೊಂಡರೂ ಈಗ ಈ ಪರಿಸರವು ಈ ಮಾನವನಿಂದಲೇ ನಾಶಗೊಳ್ಳುತ್ತಿದೆ, ಎಂತಹ ಒಂದು ದುರ್ದೈವ ! ತನ್ನ ಅಭಿವೃದ್ದಿ ಹಾಗು ಸಕಲ ಜ್ಞಾನವು ಈ ನಿಸರ್ಗದ ಕಾಣಿಕೆಯೆಂಬುದನ್ನು ಮರೆತು ತನ್ನ ಸ್ವಾರ್ಥಕ್ಕಾಗಿಯೂ ಮತ್ತು ತನ್ನ ಐಷರಾಮಿ ಜೀವನಕ್ಕಾಗಿ ನಿಸರ್ಗದ ನಾಶದ ಹಾದಿಯನ್ನು ಹಿಡಿದಿದ್ದಾನೆ. ಈ ಪರಿಸರವನ್ನು ನೋಡುತ್ತಿರುವ ಮಾನವ “ಇದು ನಮಗಾಗಿ ದೊರೆತ ಕಾಣಿಕೆ” ಎಂದೆನ್ನುವ ಬದಲು “ಯಾರದೋ ಸ್ವತ್ತು, ಲಾಭ ನನಗೆ” ಎಂದು ಅರಣ್ಯ ಸಂಪತ್ತನ್ನೇ ಲೂಟಿ ಮಾಡುತ್ತಾ ಬಂದಿದ್ದಾನೆ.

ಆದರೆ, ನಮ್ಮ ಆದಿ ಪ್ರಕೃತಿಯಾಗಿದ್ದರಿಂದ ಇದರ ಅಂತ್ಯವು ನಮ್ಮ ಅಂತ್ಯವಾಗಿಯೂ ಇರುವುದು. ಇದರ ಬಗ್ಗೆ ಬುದ್ದಿವಂತ ಮಾನವ ಗಂಭೀರವಾಗಿ ಯೋಚಿಸಬೇಕಾಗಿದೆ. ಈಗಾದರು ಎಚ್ಚೆದ್ದು ಪ್ರಕೃತಿಯ ಉಳಿವಿಗಾಗಿ ಮತ್ತು ಬೆಳೆಸುವ ಪ್ರಯತ್ನವನ್ನ ಮಾಡಬೇಕಾಗಿದೆ. ಪ್ರಕೃತಿಯ ರಕ್ಷಣೆಯೇ ನಮ್ಮ ಸ್ವರಕ್ಷಣೆಯಾಗಿದೆ. ಇದು ಈ ಮಾನವಕುಲದ ಅಭಿವೃದ್ದಿಯೊಂದಲ್ಲದೆ ರಾಷ್ಟ್ರದ ಸಮೃದ್ಧ ಬೆಳವಣಿಗೆಗೂ ದಾರಿಯಾಗುವುದು.