ಗುರುವಾರ, ಜುಲೈ 9, 2020
ಶುಕ್ರವಾರ, ಮೇ 29, 2020
"ನೆನೆಪುಗಳ ನಗು" - - ಕವನ 20
ನೀಲಾ ಮನದ ಬಾನಲಿ
ಹೊಳೆದಿವೆ ಕನಸುಗಳ ಮಿನುಗು...
ಪಾದದೆಡೆಗೆ ಹರಿದಿದೆ ಅಲೆಯು
ಎದೆಯಲ್ಲಾಗಿದೆ ಸಂಭ್ರಮದ ಸೊಬಗು...
ಕನಸುಗಳ ಸಾಗರದ ಕೊರೆತಕೆ
ಮಿಡಿಯಲಿ ಮನದಲಿ "ತುಸುನಗು"...
ಬಾಲ್ಯ-ಭವಿಷ್ಯಗಳ ಸೆರೆಯಲಿ
ಕೆಲ ನೆನೆಪುಗಳಿವೆ ನನಗೂ...
ನೆನೆದವೆಲ್ಲಾ ಸಿಗದಿರುವುದು ಇಲ್ಲಿ
ಇನ್ನೇಕೆ ಬೇಕು ಆ ಕೊರಗು...
ಇರುವ ನೆನಪುಗಳನ್ನೇ ಉಳಿಸಿ
ಮೂಡಲಿ ಆನಂದದ "ಕಿರುನಗು"...
ಮರಳಿ ಬರಬಹುದೇ ಆಕ್ಷಣಗಳು
ನೆನಪುಗಳು ನೆನೆಯದು ಜಡಿಮಳೆಗೂ...
ನಗುವೊಂದು ಅದ್ಬುತ ಸೃಷ್ಟಿಯು
ಸಿಗಲಾರದು ಕಾರಣವು ಕೊನೆಗೂ...
ಬಾಳನೌಕೆಯಲಿ ಎಲ್ಲವ ಮರೆತು
ಬಲವಾಗಲಿ ಜೀವನದಲಿ "ಮುಗುಳುನಗು"...
ಬುಧವಾರ, ಏಪ್ರಿಲ್ 15, 2020
"ಎನ್ನ ಕೊನೆದಿನ" - - ಕವನ 19
ಕಳೆದಿರುವೆನು ಮೂರುದಶಕಗಳ ಯಾನ,
ಇಂದು ಎಂಬುವುದ ಮರೆಸಿದೆ ಎನ ಅಜ್ಞಾನ,
ಕೊರಗಿಹುದು ಕನಸುಗಳು ತುಂಬಿರುವ ಈ ಮನ...
ಏನು ಮಾಡುವುದು ಈಕ್ಷಣ? "ಇದು ಎನ್ನ ಕೊನೆದಿನ"...
ದೇಶ-ವಿದೇಶ ಸುತ್ತಬೇಕಿನಿಸಿತು ಆದಿನ,
ಕೋಶ-ಭಾಷೆಗಳ ಓದಬೇಕಿತ್ತು ಪ್ರತಿದಿನ,
ಹಣವ ಬಯಸಿ ಕಳೆದುಹೋಯಿತು ಏನ ಜೀವನ...
ಉಳಿದಿರುವುದೇ ಸಮಯವು ಇನ್ನು? "ಇದು ಎನ್ನ ಕೊನೆದಿನ"...
ಕಲಿಯಬೇಕೆಂದಿದ್ದೆನು ಹಾಡಲು ಸುಮಧುರ ಗಾನ,
ನೀಡಬೇಕೆಂದಿದ್ದೆನು ಬಡವರಿಗೆ ಬಹು-ದಾನ,
ಬರಿ ಇದ ನೆನೆದೇ ಕಳೆದೆನು, ಬೆಳೆಸಲಿಲ್ಲ ಈಗುಣ...
ಇನ್ನಿರುವುದೇ ನನಗೆ ಈ ಋಣ? "ಇದು ಎನ್ನ ಕೊನೆದಿನ"...
ಸಾಯುವ ಮೊದಲು ಮಾಡಬೇಕಿತ್ತು ಒಳ್ಳೇದನ್ನ,
ಇದ ಕೊರಗುವ ಮುನ್ನ ಮಾಡು ನೆನೆದ ಕ್ಷಣ,
ಮತ್ತೊಮ್ಮೆ ಮರುಗಳಿಸದು ಈ ಕಣ ಜೀವನ...
ಯಾರರಿವರು ನಾಳೆವೆಂಬುವ ಪಯಣ? "ಇದು ಎನ್ನ ಕೊನೆದಿನ"...
ಸೋಮವಾರ, ಮಾರ್ಚ್ 30, 2020
"ಸಂಚಾರಿಯಾಗುವೆ" - ಕವನ 18
ರೆಕ್ಕೆಯ ಹರಡಿ ಗಗನದಿ ತೇಲೋ
ಹಕ್ಕಿಯಾಗ ಬೇಕೆನಿಸಿದೆ ...
ಜಗವ ನೋಡುವಾಸೆ ಮೂಡಿದೆ
ಕಾದು ಕುಳಿತಿಹೆ ಸರಿಸಮಯಕೆ ...
ಯಂತ್ರನಾಗಿ ದುಡಿಯೋ ಶರೀರ
ವಿರಾಮವನ್ನೀಗ ಕೋರಿದೆ ...
ಖುಷಿಯೇ ಇರದೆ ದುಡಿಮೆ ತಂದ
ಜಿಗುಪ್ಸೆ ತೊರೆಯಬೇಕಿದೆ ...
ದುಡಿಮೆ ಏಕೆ? ಪಯಣ ಬೇಕೇ?
ಗೊಂದಲವೀಗ ಶುರುವಾಗಿದೆ ...
ಮಡಿವ ಮುನ್ನ ಭುವಿಯ ಬಣ್ಣ
ಕಾಣಬೇಕಿದೆ ಇದ ಮರೆಯದೆ ...
ಇರುವುದೊಂದೇ ಜನುಮ ನಮಗೆ
ಕಳೆಯಬೇಕೆ ಬದುಕ ಸುಮ್ಮನೆ ?
ಸಂಚಾರಿಯಾಗುವೆ ಧರೆಯ ಲೋಕದಿ
ಸವಿಯಬೇಕಿದೆ ಕೆಲ ಕ್ಷಣಗಳೆ...
ಭಾನುವಾರ, ಮಾರ್ಚ್ 8, 2020
ಕರಾವಳಿಯಿಂದ ಬೆಂಗಳೂರಿಗೆ ಹೊಸ ರೈಲು- ಇನ್ನು ವಿಳಂಬದ ಮಾತೇ ಇಲ್ಲ
ಕರಾವಳಿ ಪ್ರದೇಶದ ಜನರ ದೀರ್ಘಕಾಲದ ಬೇಡಿಕೆಯು ಈಗ ಈಡೇರಿದಂತಾಗಿದೆ. ಹೊಸದಾಗಿ ಪ್ರಾರಂಭವಾಗಿರುವ ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್ (ಗಾಡಿ ಸಂಖ್ಯೆ ೧೬೫೯೫/೧೬೫೯೬) ಬೆಂಗಳೂರಿನಿಂದ ಉಡುಪಿ, ಕುಂದಾಪುರ ಮತ್ತು ಕಾರವಾರ ಗಳಿಗೆ ನೇರ ಸಂಪರ್ಕವನ್ನು ಒದಗಿಸುತ್ತದೆ. ಈ ರೈಲಿನ ವಿಶೇಷವೆಂದರೆ ಇದು ಮಂಗಳೂರು ನಗರಕ್ಕೆ ಪ್ರಯಾಣಿಸುವುದಿಲ್ಲ, ಇದರಿಂದಾಗಿ ಉಡುಪಿ ಮತ್ತು ಉತ್ತರ ಕನ್ನಡಕ್ಕೆ ಹೋಗುವ ಪ್ರಯಾಣಿಕರಿಗೆ ಸಮಯ ಉಳಿತಾಯವಾಗುತ್ತದೆ. ಈ ಹಿಂದೆ ಚಾಲ್ತಿಯಲ್ಲಿದ್ದ ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್ ಎರಡು ಗಂಟೆಗಳಷ್ಟು ನಿಧಾನವಾಗಿತ್ತು ಏಕೆಂದರೆ ಅದು ಮಂಗಳೂರು ಜಂಕ್ಷನ್‌ಗೆ ಹೋಗಿ ನಂತರ ಎಂಜಿನ್ ರಿವರ್ಸ್ ಮಾಡಿ ಮತ್ತೆ ಉಡುಪಿ-ಕಾರವಾರ ಕಡೆಗೆ ಪ್ರಯಾಣಿಸುತಿತ್ತು. ಹೊಸ ರೈಲಿನ ಚಾಲನೆಯಿಂದ ಈ ಹಿಂದಿನ ಬೆಂಗಳೂರು-ಕಾರವಾರ ರೈಲಿನ ಸಂಚಾರವನ್ನು ಸ್ಥಗಿತ ಮಾಡಲಾಗುತ್ತಿದೆ.
ಹೊಸ ಮಾರ್ಗದಲ್ಲಿ ರೈಲು ಮಂಗಳೂರು ಸಮೀಪದ ಪಡಿಲ್ ಜಂಕ್ಷನ್ ನಿಂದ ನೇರವಾಗಿ ಉಡುಪಿ ಕಡೆಗೆ ಪ್ರಯಾಣಿಸಲಿದೆ. ಹಾಗಾಗಿ ರೈಲು ಬೆಳಿಗ್ಗೆ ೮ ಗಂಟೆಯ ಬದಲು ಬೆಳಿಗ್ಗೆ ೪:೩೦ ಕ್ಕೆ ಉಡುಪಿಗೆ ತಲುಪಲಿದೆ. ಮತ್ತು ಬೆಳಿಗ್ಗೆ ೮:೨೫ ಕ್ಕೆ ಕಾರವಾರ ತಲುಪಲಿದೆ.
ಈ ಹಿಂದಿನ ಕಾರವಾರ ಎಕ್ಸ್ಪ್ರೆಸ್ ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಹೋಗುವ ರೈಲಿನೊಂದಿಗೆ ಜಂಟಿಯಾಗಿ ಮಂಗಳೂರು ತಲುಪುತಿತ್ತು . ನಂತರ ಮಂಗಳೂರಿನಲ್ಲಿ ಒಂದು ರೈಲು ದಕ್ಷಿಣಕ್ಕೆ ಕಣ್ಣೂರಿಗೆ ಮತ್ತು ಇನ್ನೊಂದು ರೈಲು ಉತ್ತರಕ್ಕೆ ಕಾರವಾರ ಕಡೆಗೆ ಹೋಗುತಿತ್ತು. ಇದು ಮಂಗಳೂರಿನಲ್ಲಿ ವಿಳಂಬಕ್ಕೆ ಕಾರಣವಾಗುತಿತ್ತು.
ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಮಂಗಳೂರು ಮೂಲಕ (ಕುನಿಗಲ್ ಮೂಲಕ ನಾಲ್ಕು ದಿನಗಳು ಮತ್ತು ಮೈಸೂರು ಮೂಲಕ ಮೂರು ದಿನಗಳು) 15 ಬೋಗಿಗಳ ಪರಿಷ್ಕೃತ ಸೆಟಪ್‌ನಲ್ಲಿ ಚಾಲನೆಯಾಗುವುದರಿಂದ ಮಂಗಳೂರಿಗೆ ರೈಲು ಸೇವೆ ಪರಿಣಾಮ ಬೀರುವುದಿಲ್ಲ. ಆದರೆ ಹೊಸ ಕಾರವಾರ ಎಕ್ಸ್ಪ್ರೆಸ್ ಚೆನ್ನರಾಯಪಟ್ಟಣ -ಸಕ್ಲೇಶಪುರ ಮಾರ್ಗವಾಗಿ ನೇರ ಉಡುಪಿ ಸೇರಲಿರುವುದರಿಂದ ಮಂಡ್ಯ ಮತ್ತು ಮೈಸೂರಿನಿಂದ, ಉಡುಪಿ ಮತ್ತು ಕಾರವಾರ ಗಳಿಗೆ ನೇರ ಸಂಪರ್ಕವು ಕಡಿತಗೊಳಿಸಿದಂತಾಗಿದೆ . ಈ ಕಾರಣ ಕೆಲವು ಜನರು ಹೊಸ ರೈಲು ವ್ಯವಸ್ಥೆಯನ್ನು ದೂರುತ್ತಿದ್ದಾರೆ. ಮಾತ್ರವಲ್ಲದೆ ಹೊಸ ರೈಲು ಮಂಗಳೂರು ಬರದೇ ಇರುವ ಕಾರಣ ಈ ರೈಲಿನ ಶೌಚಾಲಯದ ನೀರು ಟ್ಯಾಂಕುಗಳಲ್ಲಿ ನೀರು ತುಂಬಿಸುವುದು ಎಲ್ಲಿ ಎಂಬ ಪ್ರಶ್ನೆ ಉದ್ಭವವಾಗಿದೆ.
ಕೆಎಸ್‌ಆರ್ ಬೆಂಗಳೂರು ಇಲ್ಲಿಂದ ಸಂಜೆ ೬:೩೦ ಕ್ಕೆ ಹೊರಡುವ ಕಾರವಾರ ಎಕ್ಸ್ಪ್ರೆಸ್ ಯಶವಂತಪುರ , ಚಿಕ್ ಬನವರ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯರಸ್ತೆ , ಕಬಕಪುತ್ತೂರು, ಬಂಟವಾಳ, ಸುರತ್ಕಲ್,
ಮುಲ್ಕಿ, ಉಡುಪಿ, ಬಾರ್ಕೂರ್, ಕುಂದಾಪುರ, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ ಹಾಗು ಅಂಕೋಲಾ ನಿಲ್ದಾಣ ಗಳಿಂದ ಕಾರವಾರ ಬೆಳಗ್ಗೆ ೮:೨೫ ಕ್ಕೆ ಸೇರಲಿದೆ.
ಮುಲ್ಕಿ, ಉಡುಪಿ, ಬಾರ್ಕೂರ್, ಕುಂದಾಪುರ, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ ಹಾಗು ಅಂಕೋಲಾ ನಿಲ್ದಾಣ ಗಳಿಂದ ಕಾರವಾರ ಬೆಳಗ್ಗೆ ೮:೨೫ ಕ್ಕೆ ಸೇರಲಿದೆ.
ಹಾಗು ಕಾರವಾರದಿಂದ ಹಿಂತಿರುಗುವ ರೈಲು ಸಂಜೆ ೬:೦೦ ಗಂಟೆಗೆ ಕಾರವಾರದಿಂದ ನಿರ್ಗಮಿಸಿ ಬೆಳಿಗ್ಗೆ ೮:೦೦ ಗಂಟೆಗೆ ಬೆಂಗಳೂರು ತಲುಪಲಿದೆ
ಗುರುವಾರ, ಫೆಬ್ರವರಿ 13, 2020
"ಕಡಲ ಅಲೆಗಳ ಜೊತೆಗೆ" - ಕವನ 17
ಸೂರ್ಯನು ಉಗುಳುತ್ತಿರುವ ಹಾಗೆ, ಮೂಡಿದೆ ಅಲೆಗಳ ಸಾಲೆ ...
ಮೂಡಿದನು ಮೂಡಣದ ರವಿಯು, ಕಡಲ ಅಡಿಯಿಂದ ಮೇಲೆ...
ಮೋಡಗಳು ಮರೆಮಾಡ ಹೊರಟಿವೆ, ಅವನ ದುಂಡಾಕಾರದ ನಗೆ...
ಕೆಂಪಾಗಿ ಕಂಡಿದೆ ಬಾನು, ಈ ಮುಂಜಾನೆಯಾ ಸವಿಗಂಪಿಗೆ...
ಹೆಜ್ಜೆಗಳ ಮಾದರಿ ಕೇಳಿದೆ, ನಿರಂತರ ಅಲೆಗಳ ಕೊರೆತ...
ಏಡಿಗಳು ಉರುಳಿವೆ ಸಾಗರಕೆ, ಅಲೆಗಳ ಹಿಂದೆ ಆಲಿಸುತ...
ಮೀನುಗಳು ಮರೆಯಾಗಿದೆ ಬೆದರಿ, ಕಾಗೆಯು ಅವುಗಳ ಹೊಂಚಿಸುತ...
ಮೈಮರೆತರು ಕಂಡು ನೋಡಿಗರು, ಈ ವಿಸ್ಮಯವ ಸವಿಯುತ...
ಹಕ್ಕಿಗಳು ಹಾರಿವೆ ಎತ್ತರದಿ, ಅವನ ಕಾಣುವ ತವಕಕೆ..
ದೋಣಿಗಳು ದೂರದಿ ಸಾಗಿದೆ, ಕಡಲಿನ ಅಂಚಿನ ಕಡೆಗೆ...
ಹೃದಯವು ಕಂಡು ಹಗುರವಾಗಿದೆ, ಕಡಲ ರಮಣೀಯ ದೃಶ್ಯಕೆ...
ಸಾಲದು ವರ್ಣಿಸಲು ಪದಗಳೇ, ಈ ಯಕ್ಷಸೃಷ್ಟಿಯ ಬೆರಗಿಗೆ...
ಶನಿವಾರ, ಜುಲೈ 27, 2019
ಮಲೆನಾಡು "ಮಲೆಗಳಿಲ್ಲದ ನಾಡು" - ನಿಖರ ಮಾತು 4
ನಾನು ನನ್ನ ಬಾಲ್ಯದ ದಿನಗಳನೊಮ್ಮೆ ನೆನೆದುಕೊಂಡರೆ ನೆನಪಾಗುವುದು ನಮ್ಮನೆಯ ಸುತ್ತಮುತ್ತಲಿನ ಹಸಿರು ಹಸಿರಾದ ಗಿಡಮರಬಳ್ಳಿಗಳು, ಹಲವಾರು ಪ್ರಾಣಿ-ಪಕ್ಷಿಗಳ ಕೂಗು, ವಿಧವಿಧವಾದ ಹಾವುಗಳು ಮತ್ತು ಚಿಟ್ಟೆಗಳು. ಮನೆಯ ಒಳಗೆ ಕೂಡ ಹಲವಾರು ಬಾರಿ ಹಾವುಗಳು ನುಸುಳಿ ಬಂದದುಂಟು. ಹವಾಮಾನಗಳ ಸನ್ನಿವೇಶಗಳು ಮಲೆನಾಡಿನಲ್ಲಿ ಬೇರೆಯೇ ಅನುಭವಗಳನ್ನು ಸೃಷ್ಟಿಮಾಡುತ್ತಿದ್ದವು. ಮಲೆನಾಡಿನಲ್ಲಿ ಬೇಸಿಗೆ ಎಂಬುದು ಅಷ್ಟೊಂದು ವ್ಯತ್ಯಾಸ ತರುತ್ತಿರಲಿಲ್ಲ. ಮಧ್ಯಾಹ್ನದ ಸಮಯಕ್ಕೆ ಹೆಚ್ಚು ಬಿಸಿಲಿದ್ದರೂ ಸೆಕೆಯಾಗುವ ಸನ್ನಿವೇಶವೇ ಇರಲಿಲ್ಲ. ಸಂಜೆ ವೇಳೆಗೆ ತಂಪಾಗಿ, ಚಳಿಗಾಲದ ಹವಾಮಾನ ಬಂದುಬಿಡುತ್ತಿತ್ತು. ವಿದ್ಯುತ್ ಕಾಣದಿರುವ ನಾವು ಸೀಮೆಎಣ್ಣೆಯ ದೀಪದಿಂದಲೇ ನಮ್ಮ ಪ್ರತಿರಾತ್ರಿಯನ್ನು ಸಾಗುತಿದ್ದೆವು.
ಮಳೆಗಾಲವಂತು ಹೇಳುವುದೆ ಬೇಡ! ಮಳೆಯ ಆ ರಭಸವು ನಮ್ಮನ್ನು ಕುಳಿತ ಜಾಗದಿಂದ ಏಳದಂತೆ ಜಡವಿಡಿಸಿಬಿಡುತ್ತಿತ್ತು. ಒಂದುವೇಳೆ ಮನೆಯಿಂದ ಹೊರಗೆ ಹೋದರೆ, ಬರುವಾಗ ಕಾಲುಗಳನ್ನೊಮ್ಮೆ ಆಳವಾಗಿ ನೋಡಿಕೊಳ್ಳಬೇಕಾಗಿತ್ತು ಅಷ್ಟೊಂದು "ಜಿಗಣೆ"ಗಳ ಹಾವಳಿ. ಒಲೆಯ ಬದಿ ಚಳಿಕಾಯಿಸಲು ಕುಳಿತರೆ ಏಳುವ ಜಾಯಮಾನವೇ ಇಲ್ಲ. ಬೆಚ್ಚಗೆ ಕಾಫಿ ಕುಡಿದು ಹಲಸಿನ ಬೀಜವನ್ನು ಒಲೆಯಲ್ಲೆ ಸುಟ್ಟು ತಿನ್ನುವ ಮಜಾವೇ ಬೇರೆಯಾಗಿತ್ತು. ಇಂತಹ ಪ್ರಸಂಗಗಳು ಮಲೆನಾಡಿನಲ್ಲೇ ಅನುಭವಿಸಲು ಸಿಗುವುದು. ಮಳೆಗಾಲ ಮುಗಿದರೆ ಸಾಕು, ನಂತರ ಚಳಿಗಾಲದ ಹಾವಳಿ. ಎಷ್ಟು ಸ್ನಾನ ಮಾಡಿದರೂ, ನೀರಿನ ಅಂಡೆ ಕಾಲಿಯಾಗುವವರೆಗೆ ಸ್ನಾನ ಮಾಡಬೇಕೆನಿಸುತ್ತಿತ್ತು. ನಿಜವಾಗಿಯೂ ಹೇಳಬೇಕೆಂದರೆ, ಮಲೆನಾಡಿನಲ್ಲಿ ಮಳೆಗಾಲ ಮತ್ತು ಚಳಿಗಾಲಗಳೇ ಪೂರ್ತಿ ವರ್ಷ ನಡಿಯುತ್ತಿತ್ತು.
ಇವು ಈಗ ಬರಿ ನೆನಪುಗಳಾಗಿಯೇ ಉಳಿದಿರುವುದು ಮಾತ್ರ. ಈಗಿನ ಮುಂದುವರಿಕೆಯೋ, ತಂತ್ರಜ್ಞಾನದ ಬೆಳವಣಿಗೆಯೋ, ಇಲ್ಲವೆ ದುರಾಸೆಯೋ ಮಲೆನಾಡಿದಲ್ಲಿ ಮಲೆಗಳ ನಾಶವು ಹೆಚ್ಚಾಗಿದ್ದು ಪೂರ್ಣವಾಗಿ ಹವಾಮಾನದಲ್ಲಿ ಬದಲಾವಣೆಯನ್ನು ತಂದಿದೆ. ಹಿರಿಯರು ಅಂದಾಜಿಸುತಿದ್ದ ಹವಾಮಾನಗಳ ಅವಧಿ ಈಗ ಅಂದಾಜು ಮಾಡಲಾಗದಷ್ಟು ಆಳವಾಗಿ ಹೋಗಿಬಿಟ್ಟಿವೆ. ಯಾವಾಗ ಮಳೆ ಬರುವುದೋ, ಚಳಿಗಾಲ ಇರುವುದೇ, ಯಾವಾಗ ಶುರು ಅಥವಾ ಅಂತ್ಯವೆಂಬುದು ತಿಳಿಯದಂತಾಗಿದೆ. ಮಲೆಗಳಿಲ್ಲದೆ ಮುಂದೊಮ್ಮೆ ಮಲೆನಾಡು "ಮಲೆಗಳಿಲ್ಲದ ನಾಡು" ಆಗುವದು ಎಂಬ ಭಾಸವಾಗುತ್ತಿದೆ.
ಸರಿಸುಮಾರು ಐದಾರು ವರ್ಷಗಳ ಹಿಂದಿನಿಂದ (ಅಂದಾಜು ೨೦೦೨ - ೨೦೦೩) ಮಲೆನಾಡಿನ ಪ್ರತಿಯೊಂದು ಮನೆಯಲ್ಲಿಯೂ ಕೂಡ ಗಾಳಿಯಂತ್ರ (ಫ್ಯಾನ್)ಗಳ ಬಳಕೆ ಹೆಚ್ಚಾಗುತ್ತಿದೆ. ನಮ್ಮ ಮನೆಯ ಬಗ್ಗೆಯೇ ಹೇಳಬೇಕೆಂದರೆ, ಬೇಸಿಗೆಗಾಲಕ್ಕೂ ಹೊದಿಕೆ ಹಾಕಿ ಮಲಗುತಿದ್ದವರು ಈಗ ಗಾಳಿಯಂತ್ರಗಳಿಲ್ಲದೆ ಮಲಗುವುದು ಕಷ್ಟವಾಗಿಬಿಟ್ಟಿದೆ. ಹಾಲು, ತರಕಾರಿಗಳು ಹಲವಾರು ದಿನಗಳವರೆಗೆ ಇಡಬಹುದಾದ ಊರಿನಲ್ಲೇ ಶೀತಲೀಕರಣ ಯಂತ್ರ(ಫ್ರಿಡ್ಜ್)ದ ಅವಶ್ಯಕತೆ ಬಂದುಬಿಟ್ಟಿದೆ. ತಾಪಮಾನ ಹೆಚ್ಚಿದೆ, ಮಳೆ ಸಮಯಕ್ಕೆ ಬರುತಿಲ್ಲ, ಚಳಿಗಾಲವಂತು ತಿಳಿಯುತ್ತಲೇ ಇಲ್ಲ.
ಮಾನವನೆಂಬುದು ಈ ಭೂಮಿಯ ಒಂದು ಜೀವಿಯಾದರೂ, ಭೂಮಿಯನ್ನೇ ನಾಶ ಮಾಡುವ ದುರ್ಗುಣ ನಮ್ಮಲ್ಲಿ ಮಾತ್ರ ಇರುವುದು. ಹೆಚ್ಚು ಬುದ್ದಿವಂತಿಕೆ ಸ್ವಯಂ ನಾಶಕ್ಕೆ ಕಾರಣವಾಗುವ ಮಾತು ಇಲ್ಲಿ ವಾಸ್ತವಕ್ಕೆ ಬರುತ್ತಿದೆ. ಇವೆಲ್ಲವು ಪ್ರಕೃತಿ ವಿಕೋಪಕ್ಕೆ ಕಾರಣವಾಗಿ ಮುಂದೊಮ್ಮೆ ಮನುಕುಲವೆಂಬುದೇ ಅಳಿಸಿಹೋಗುವುದಂತು ನಿಜ. ಈಗಲೂ ಸಮಯ ಮಿಂಚಿಲ್ಲ, ಪ್ರತಿಯೊಬ್ಬರು ಮರ ನೆಡುವ ಮೂಲಕ, ಪರಿಸರ ಮಾಲಿನ್ಯ ನಿಯಂತ್ರಣ ಮಾಡುವ ಮೂಲಕ ಮತ್ತೊಮ್ಮೆ ಈ ಭುವಿಯನ್ನು ಹಸಿರಾಗಿಸಬಹುದು. ಇದು ನನ್ನದೋ ಅಥವಾ ಬರಿ ನಿನ್ನದೋ ಭುವಿಯಲ್ಲ, ನಮ್ಮೆಲ್ಲರ ಭುವಿ. ಪ್ರತಿಯೊಬ್ಬರ ಖಾಳಜಿಯು ಇಲ್ಲಿ ಅತಿಅವಶ್ಯಕ.
ಶುಕ್ರವಾರ, ಜುಲೈ 19, 2019
"ಭಿಕಾರಿ ಬದುಕು" - ಕವನ 16
ಮುಂಜಾನೆಯ ಆ ತಾಜಾ ಮಜಾ
ಇಲ್ಲವಾಗಿದೆ ...
ಹೊಸದಿನವೆಂಬ ಖುಷಿಯೂ ಇಂದು
ಕಮ್ಮಿಯಾಗಿದೆ ...
ಸೂರ್ಯಚಂದ್ರರ ಬರುವು ತಿಳಿಯದೆ
ಮರೆತೇಹೋಗಿದೆ ...
ಏನಿದು ಈ ಬದುಕು, ಈ ತರ
ಭಿಕಾರಿಯಾಗಿದೆ ....
ಏನೇ ಆಗಲಿ, ಊರೇ ಬೀಳಲಿ ಎಂಬ
ಭಾವನೆ ಬೆಳೆದಿದೆ ...
ತವಕವೆ ಇಲ್ಲದ ಈ ಹೃದಯ
ಮೆಲ್ಲಚಲಿಸಿದೆ ...
ತಾರುಣ್ಯ ಮರೆತ ದೇಹವು
ಸೊರಗಿಹೋಗಿದೆ ...
ಏನಿದು ಈ ಬದುಕು, ಈ ತರ
ಭಿಕಾರಿಯಾಗಿದೆ ....
ಏನೋ ತಿಳಿದುಕೊಳ್ಳುವ ಆಸೆ
ಈಗಮಾಸಿದೆ ...
ಮಾಸದ ಸಂಬಳ ಸರಿಸಮಯಕ್ಕೆ
ಬಂದುಸೇರಿದೆ ...
ಎಲ್ಲಾ ಇದ್ದೂ, ಏನೋ ಇಲ್ಲವೆಂಬ
ಕೊರಗುಮೂಡಿದೆ ...
ಏನಿದು ಈ ಬದುಕು, ಈ ತರ
ಭಿಕಾರಿಯಾಗಿದೆ ....
ಗುರುವಾರ, ಮೇ 9, 2019
"ನಡುರಾತ್ರಿಯ ಹಾದಿಯಲಿ" - ಕವನ 15
ನಡುರಾತ್ರಿಯ ಹಾದಿಯಲಿ
ನಡೆಯುತ್ತಿರುವೆನು ನಾನೊಬ್ಬನೇ ...
ಬೀದಿದೀಪಗಳು ತಲೆಬಾಗಿ
ನೋಡುತ್ತಿವೆ ನನ್ನನೇ ...
ಧರೆಯ ಬೆಡಗಿಗೆ ಚಂದ್ರನು
ನಾಚಿ ಮರೆಯಾದ ಬೇಗನೇ...
ಆಹಾ! ರಾತ್ರಿಯ ಈ ಸೊಗಸನು
ಸವಿಯದವ ಇದ ಬಲ್ಲನೇ ...
ನಡುರಾತ್ರಿಯ ಹಾದಿಯಲಿ
ಏಕಾಂಗಿಯಾದೆನು ನನ್ನೊಳಗೆ...
ಜೊತೆಗಿರಬೇಕಿತ್ತು ಒಂದು ಸಖಿ
ಇದನೆನೆದು ಮೂಡಿತು ಮುಗುಳುನಗೆ...
ನಾಯಿಗಳು ಬೊಗಳದೆಯೇ
ಗುರುಗುಟ್ಟುತ್ತಿವೆ ಸುಮ್ಮಗೆ ...
ನಡೆದು ಆಯಾಸವೆನಿಸಿದರೂ
ಸಾಗುತ್ತಿರುವೆನು ಮೆಲ್ಲಗೆ...
ನಡುರಾತ್ರಿಯ ಹಾದಿಯಲಿ
ಸುಳಿಯುತಿಹುದು ಗುರಿಯೋಚನೆ...
ಮನುಷ್ಯನಿರದ ಈವೇಳೆಗೆ
ಶಾಂತತಾಳಿದೆ ಏನ ಭಾವನೆ ...
ಬೀಸೋ ಗಾಳಿಗೆ ಸಿಲುಕಿ
ಧೂಳುಕಣಗಳ ಚಲನೆ...
ಬಹುದೂರ ಬಾಕಿ ಇರುವುದೂ
ತಲುಪಲೂ ನಮ್ಮನೆ...
ಗುರುವಾರ, ಮಾರ್ಚ್ 28, 2019
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲ !! | ಟಾಂಗ್-ಕಿಂಗ್ (ಲೇಖನ) 2
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಳೆದ ಕೆಲವು ವರುಷಗಳಿಂದ ಪ್ರಯಾಣಿಕರ ನಿರಂತರ ಧನಾತ್ಮಕ ವೃದ್ಧಿಯಿಂದ ಹೆಸರುಗಳಿಸಿದೆ.

ಆದರೆ ಈಗ ಮಂಗಳೂರಿನಲ್ಲಿ ವೈಮಾನಿಕ ಪ್ರಯಾಣಿಕರ ಸಂಖ್ಯೆ ಕುಗ್ಗುತ್ತಿದೆ. ಆದರೇ ಇದೇನು ದಿಢೀರ್ ಬದಲಾವಣೆಯಲ್ಲ, ಭವಿಷ್ಯದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿಪ್ರಯಾಣಿಕರ ಸಂಖ್ಯೆ ಇಳಿಮುಖವಾಗುವುದೆಂದು ಕಳೆದ ಕೆಲವು ವರುಷಗಳಿಂದಲೇ ಅಂದಾಜಿಸಲಾಗುತಿತ್ತು. ಈ ಸಂದೇಹವನ್ನು ಹುಟ್ಟು ಹಾಕಲು ಮುಖ್ಯ ಕಾರಣಾವಾಗಿದ್ದು ಕೇರಳ ರಾಜ್ಯದ ಕಣ್ಣೂರು ಎಂಬ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಾಣಗೊಳ್ಳಲಾರಂಭಿಸಿದ ಕೇರಳದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ಹೌದು, ತಿರುವನಂತಪುರಂ, ಕೊಚ್ಚಿ,ಕಲ್ಲಿಕೋಟೆ ನಂತರ ಕಣ್ಣೂರು ಕೇರಳದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರ. (ಕರ್ನಾಟಕದಲ್ಲಿ ಬೆಂಗಳೂರು ಹೊರತು ಪಡಿಸಿದರೆ ಮಂಗಳೂರು ಮಾತ್ರ) ಆದರೆ ಇದರಿಂದ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಏನು ತೊಂದರೆ ಎಂದು ಕೇಳುವುದಾದರೆ ಕಣ್ಣೂರು ಇರುವುದು ಮಂಗಳೂರಿನಿಂದ ಬರೇ ೧೪೩ ಕಿ.ಮೀ. ದೂರದಲ್ಲಿ. ಈ ಮೊದಲು ಮಂಗಳೂರು ವಿಮಾನ ನಿಲ್ದಾಣ ಬರೀ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮಾತ್ರವಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಕಾಸರಗೋಡು ಹಾಗು ಕೇರಳದ ಉತ್ತರ ಭಾಗದ ಜಿಲ್ಲೆಯ ಪ್ರಯಾಣಿಕರಿಗೂ ಆಸರೆಯಾಗಿತ್ತು. ಆದರೆ ನೂತನ ಕಣ್ಣೂರು ವಿಮಾನ ನಿಲ್ದಾಣದವು ಕೊಡಗು ಹಾಗು ಕಾಸರಗೋಡು ಜಿಲ್ಲೆಗಳಿಗೆ ಸಮೀಪದಲ್ಲಿರುವುದರಿಂದ ಈ ಜಿಲ್ಲೆಯ ಪ್ರಯಾಣಿಕರು ಕಣ್ಣೂರಿನ ಕಡೆಗೆ ಆಕರ್ಷಿತರಾಗೋದು ಸರ್ವೇ ಸಾಮಾನ್ಯ. ಮಾತ್ರವಲ್ಲದೆ ಕಣ್ಣೂರಿನ ವಿಮಾನ ನಿಲ್ದಾಣದ ಓಟದಾರಿ (ರನ್ ವೇ) ಮಂಗಳೂರಿನ ನಿಲ್ದಾಣಕ್ಕಿಂತ ಬರೋಬ್ಬರಿ ೧೦೦೦ ಮೀಟರ್ ಉದ್ದವಿದೆ (ಒಟ್ಟು ಉದ್ದ ೩೫೦೦ ಮೀ) ಹೀಗಾಗಿ ಇಲ್ಲಿ ವಿದೇಶಿ ವೈಮಾನಿಕ ಸಂಸ್ಥೆಗಳು ಪ್ರಯಾಣಕ್ಕಾಗಿ ಹಾತೊರೆಯುತ್ತಿವೆ. ಮಂಗಳೂರಿನ ಟೇಬಲ್ ಟಾಪ್ ರನ್ ವೇ ಉದ್ದ ಬರೇ ೨೪೫೦ ಮೀಟರ್ ಗಳಿಗೆ ಸೀಮಿತವಾಗಿರಿರುವುದರಿಂದ ವಿದೇಶಿ ವಿಮಾನಗಳು ಈ ಕಡೆ ತಲೆನೂ ಹಾಕುತ್ತಿಲ್ಲ. (ಮಂಗಳೂರಿನಿಂದ ಹಾರಾಟ ನಡೆಸುತ್ತಿರುವ ಅಂತಾರಾಷ್ಟ್ರೀಯ ವಿಮಾನಗಳು ಭಾರತೀಯ ಮೂಲದವೇ ಆಗಿವೆ.)
ಅಂತೂ ಡಿಸೆಂಬರ್ ೦೯, ೨೦೧೮ ರಂದು ಕಣ್ಣೂರು ವಿಮಾನ ನಿಲ್ದಾಣ ಉದ್ಘಾಟನೆಯಾಗಿ ಲೋಕಾರ್ಪಣೆಗೊಂಡಿತು. ಕಳೆದ ಮೂರು ತಿಂಗಳಲ್ಲಿ ಕಣ್ಣೂರಿನಲ್ಲಿ ವಿಮಾನಗಳ ಹಾರಾಟ ಸಂಖ್ಯೆ ವೃದ್ಧಿಯಾಗುತ್ತಲೇ ಬರುತ್ತಿದೆ. ಅದಕ್ಕೆ ಪೂರಕವಾಗಿ ಕಳೆದ ಮೂರು ತಿಂಗಳಲ್ಲಿ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗುತ್ತಿದೆ.
ಹಾಗಾದರೆ ಊಹೆ/ಅನುಮಾನ/ನುಡಿದ ಭವಿಷ್ಯ ನಿಜವಾಯಿತೇ? ಕಣ್ಣೂರು ವಿಮಾನ ನಿಲ್ದಾಣ ಉದ್ಘಾಟನೆಯಿಂದ ಮಂಗಳೂರು ನಿಲ್ದಾಣಕ್ಕೆ ಪೆಟ್ಟು ಬಿತ್ತೇ?
ಇಲ್ಲ, ಇದ್ಯಾವುದು ನಿಜವಲ್ಲ,
ಒಂದು ಬಾರಿ ಈ ಕೆಳಗಿನ ವಿಷಯಗಳನ್ನು ಪರಿಗಣಿಸಿ.
೧. ದೂರ :
ಕಾಸರಗೋಡು ಹಾಗು ಮಡಿಕೇರಿ (ಕೊಡಗು) ಜನರಿಗೆ ಈ ಎರಡು ವಿಮಾನ ನಿಲ್ದಾಣಗಳು ಎಷ್ಟು ದೂರದಲ್ಲಿವೆ ಎಂದು ಪರಿಶೀಲಿಸೋಣ.
ಅ) ಕಾಸರಗೋಡು-ಮಂಗಳೂರು

ಕಾಸರಗೋಡು ನಿಂದ ಮಂಗಳೂರು ೫೯ ಕಿ.ಮೀ. (ಸಮಯ ೧ ಘಂಟೆ ೩೦ ನಿಮಿಷಗಳು)
ಆ) ಕಾಸರಗೋಡು - ಕಣ್ಣೂರು
ಕಾಸರಗೋಡು ನಿಂದ ಕಣ್ಣೂರು ೧೧೨ ಕಿ.ಮೀ. (ಸಮಯ ೩ ಘಂಟೆ ೧೦ ನಿಮಿಷಗಳು)
ಕಾಸರಗೋಡಿ ನಿಂದ ಕಣ್ಣೂರು , ಮಂಗಳೂರಿಗಿಂತ ಬರೋಬರಿ ಎರಡು ಪಟ್ಟು ದೂರದಲ್ಲಿದೆ.
ಸ್ವತಃ ಕಣ್ಣೂರು ನಗರದಿಂದ ಕಣ್ಣೂರು ವಿಮಾನ ನಿಲ್ದಾಣ ಸುಮಾರು ೨೭ ಕಿ. ಮೀ. ದೂರದಲ್ಲಿದೆ. ಕಾಸರಗೋಡು ಜಿಲ್ಲೆಯ ದಕ್ಷಿಣ ತುತ್ತ ತುದಿಯಿಂದಲೂ ಮಂಗಳೂರೇ ಸಮೀಪ. ಹೀಗಾಗಿ ದುಬೈ ಹಾಗು ಇತರೆ ಗಲ್ಫ್ ರಾಷ್ಟ್ರಗಳಿಗೆ ಹೋಗುವ ಕಾಸರಗೋಡಿನ ಪ್ರಯಾಣಿಕರು ಕಣ್ಣುರಿನೆಡೆಗೆ ಮುಖಮಾಡುತ್ತಾರೆ ಎಂಬ ಊಹಾ ಪೋಹಾ ವನ್ನು ಸುಲಭವಾಗಿ ತಳ್ಳಿ ಹಾಕಬಹುದು.
ಈಗ ಕೊಡಗು ಜಿಲ್ಲೆ ನೋಡೋಣ.
ಇ) ಮಡಿಕೇರಿ-ಮಂಗಳೂರು
ಮಡಿಕೇರಿ (ಕೊಡಗು)-ಮಂಗಳೂರು ೧೪೪ ಕಿ.ಮೀ. (ಸಮಯ ೩ ಘಂಟೆ ೨೩ ನಿಮಿಷಗಳು)
ಈ) ಮಡಿಕೇರಿ-ಕಣ್ಣೂರು

ಮಡಿಕೇರಿ(ಕೊಡಗು)-ಕಣ್ಣೂರು ೯೦ ಕಿ.ಮೀ (ಸಮಯ ೨ ಘಂಟೆ ೩೩ ನಿಮಿಷಗಳು)
ಮಡಿಕೇರಿ ಜನರಿಗೆ ಕಣ್ಣೂರು ವಿಮಾನ ನಿಲ್ದಾಣ ಮಂಗಳೂರಿಗಿಂತ ಹೆಚ್ಚು ಸಮೀಪ. ಕೊಡಗಿನ ಮತ್ತೊಂದು ನಗರ ವಿರಾಜಪೇಟೆಯಿಂದ ಕಣ್ಣೂರು ಬರೇ ೬೦ ಕಿ.ಮೀ. ದೂರದಲ್ಲಿ ಇದೆ. ಹಾಗಾಗಿ ಇಲ್ಲಿನ ಜನರು ಮಂಗಳೂರಿಗೆ ಬರುವ ಸುಮಾರು ಒಂದರಿಂದ ಎರಡು ತಾಸಿನಷ್ಟು ಸಮಯವನ್ನು ಉಳಿಸಬಹುದಾಗಿದೆ. ಮಾತ್ರವಲ್ಲದೆ ಕಣ್ಣೂರು ವಿಮಾನ ನಿಲ್ದಾಣದಿಂದ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ದಲ್ಲಿಯೂ ಬೆಳವಣಿಗೆಯಾಗುವ ಸಾಧ್ಯತೆಗಳಿವೆ.
೨) ವಿಮಾನಯಾನ ತಾಣಗಳು
ಇನ್ನು ಈ ಎರಡು ವಿಮಾನ ನಿಲ್ದಾಣಗಳು ಯಾವೆಲ್ಲ ಜಾಗಗಳಿಗೆ ಪ್ರಯಾಣ ಕಲ್ಪಿಸಿ ಕೊಡುತ್ತವೆ ಎಂದು ನೋಡೋಣ.
ಮಂಗಳೂರಿನ ವಿಮಾನಯಾನ ತಾಣಗಳು


ಕಣ್ಣೂರು ಹಾಗು ಮಂಗಳೂರಿನಿಂದ ವಿಮಾನಗಳು ಹೆಚ್ಚು ಕಮ್ಮಿ ಸಮನಾದ ಜಾಗಗಳಿಗೆ ಪ್ರಯಾಣಿಸುತ್ತಿವೆ. ಸ್ಪಷ್ಟವಾಗಿ ಕಣ್ಣೂರಿನಿಂದ ವಿಮಾನಗಳು ಇನ್ನು ಪೂರ್ಣಗತಿಯಲ್ಲಿ ಪ್ರಾರಂಭವಾಗಿಲ್ಲ, ಅದಕ್ಕಿನ್ನೂ ಮೂರು ತಿಂಗಳು ಹೆಚ್ಚು ಸಮಯ ಬೇಕಾಗುವುದು.
ಹಾಗಾದರೆ ಮಂಗಳೂರಿನಲ್ಲಿ ಪ್ರಯಾಣಿಕರ ಇಳಿಮುಖಕ್ಕೆ ಕಾರಣವೇನು?
ಅದಕುತ್ತರ , ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಭಾರತದ ಜೆಟ್ ಏರ್ವೇಸ್ (Jet Airways) ವಿಮಾನ ಸಂಸ್ಥೆ.
ಹೌದು, ಕಳೆದ ವರ್ಷದ ಅಂಕಿ ಅಂಶಗಳ ಪ್ರಕಾರ ಮಂಗಳೂರಿನಿಂದ ಪ್ರತಿದಿನ ಜೆಟ್ ಏರ್ವೇಸ್ ನ ೪ ವಿಮಾನಗಳು ಮುಂಬೈ ಕಡೆಗೆ , ೫ ವಿಮಾನಗಳು ಬೆಂಗಳೂರಿನೆಡೆಗೆ ಹಾಗು ತಲಾ ೧ ವಿಮಾನ ದೆಹಲಿ, ದುಬೈ ಶಾರ್ಜಾ, ಹಾಗು ಅಬುದಾಬಿ ಕಡೆಗೆ ಪ್ರಯಾಣಿಸುತಿದ್ದವು. ಮಂಗಳೂರಿನಲ್ಲಿ ಜೆಟ್ ಏರ್ವೇಸ್ ವಿಮಾನಗಳದ್ದೇ ಮೇಲುಗೈ ಇತ್ತು. ಆದರೆ ಈಗ ಜೆಟ್ ಏರ್ವೇಸ್ ಸಂಸ್ಥೆಯ ಆರ್ಥಿಕ ಬಿಕ್ಕಟ್ಟಿನಿಂದ ಮಂಗಳೂರಿನ ಕಡೆ ಹಾರಾಟ ನಡೆಸುತ್ತಿದ್ದ ಎಲ್ಲಾ ಜೆಟ್ ಏರ್ವೇಸ್ ವಿಮಾನಗಳು ಒಂದರ ನಂತರ ಒಂದರಂತೆ ಸ್ಥಗಿತಗೊಂಡಿವೆ. (ಮೇಲಿನ ಮಂಗಳೂರಿನ ವಿಮಾನಯಾನ ತಾಣಗಳ ಪಟ್ಟಿಯಲ್ಲಿ ನೀವು ಗಮನಿಸಬಹುದು.) ದಿನಂಪ್ರತಿ ಇಲ್ಲಿ ೫೮ ವಿಮಾನಗಳು ಓಡಾಟ ನಡೆಸುತಿದ್ದವು ಆದರೆ ಈಗ ಈ ಸಂಖ್ಯೆ ೨೫ ಕ್ಕೆ ಕುಸಿದಿದೆ. ಇದರ ಬದಲಾಗಿ ಬೇರೆ ವಿಮಾನ ಸಂಸ್ಥೆಗಳು ಮಂಗಳೂರಿಗೆ ತಮ್ಮ ವಿಮಾನಗಳ ಸಂಖ್ಯೆಯನ್ನೇನು ಹೆಚ್ಚಿಸಿಲ್ಲ. ಹೀಗಾಗಿ ಕಳೆದ ಒಂದು ತಿಂಗಳಲ್ಲಿ ಮಂಗಳೂರಿನಲ್ಲಿ ಪ್ರಯಾಣಿಕರ ಸಂಖ್ಯೆ ಶೇಕಡಾ ೩೦ ರಷ್ಟು ಕುಗ್ಗಿದೆ. ಅಲ್ಲ ಸ್ವಾಮಿ ವಿಮಾನಗೆಳೆ ಇಲ್ಲದ ಮೇಲೆ ಜನರು ಪ್ರಯಾಣಿಸುವುದಾದರು ಹೇಗೆ ಹೇಳಿ?
ಜೆಟ್ ಏರ್ವೇಸ್ ಸಂಸ್ಥೆ ತನ್ನ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವ ನೀರಿಕ್ಷೆಯಲ್ಲಿದೆ. ಹೀಗಾಗಿ ತನ್ನ ವಿಮಾನಗಳನ್ನು ಪುನಃ ಹಿಂದಿನಂತೆಯೇ ಚಲಾಯಿಸಲು ಮೇ ತಿಂಗಳಿನ ಗಡುವು ತೆಗೆದುಕೊಂಡಿದೆ. ಹೀಗಾದರೆ ಮತ್ತೆ ಮಂಗಳೂರಿನಲ್ಲಿ ಮೊದಲಿನ ಹಾಗೆ ವಿಮಾನಗಳ ಸಂಖ್ಯೆ ದಿನಂಪ್ರತಿ ೫೦ ಮೀರಲಿದೆ ಹಾಗು ಪ್ರಯಾಣಿಕರ ಸಂಚಾರದಲ್ಲೂ ವೃದ್ಧಿಯಾಗಲಿದೆ.
ಇತ್ತೀಚಿನ ಬೆಳೆವಣಿಗೆಗಳ ಪ್ರಕಾರ ವಿಮಾನ ನಿಲ್ದಾಣಗಳನ್ನು ಖಾಸಗಿಕರಣ ಗೊಳಿಸುವ ನಿಟ್ಟಿನಲ್ಲಿ ಮಂಗಳೂರು ವಿಮಾನ ನಿಲ್ದಾಣವನ್ನು ಈಗಾಗಲೇ ಅದಾನಿ ಸಂಸ್ಥೆ ಬಿಡ್ಡಿಂಗ್ ನಲ್ಲಿ ಗೆದ್ದು ಕೊಂಡಿದೆ. ಮಂಗಳೂರಿನ ವಿಮಾನ ನಿಲ್ದಾಣ ಖಾಸಗೀಕರಣಗೊಂಡರೆ ಸ್ವಲ್ಪ ಹೆಚ್ಚುವರಿ ಅಭಿವೃದ್ಧಿಯನ್ನು ನಾವು ಕಾಣಬಹುದಾಗಿದೆ. ಆದರೆ ವಿಮಾನ ನಿಲ್ದಾಣದ ರನ್ ವೇ ಉದ್ದಪಡಿಸುವ ವಿಚಾರ ಮಾತ್ರ ಇನ್ನೂ "ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವವರಾರು?" ಎಂಬಂತೆ ಉಳಿದು ಬಿಟ್ಟಿದೆ. ರನ್ ವೇ ಉದ್ದಗೊಂಡರೆ ಭವಿಷ್ಯದಲ್ಲಿ ಐರೋಪ್ಯ ರಾಷ್ಟ್ರಗಳಿಗೂ ಮಂಗಳೂರಿನಿಂದಲೇ ಪ್ರಯಾಣ ಬೆಳೆಸಬಹುದಾಗಿದೆ. (ಅದಕ್ಕಾಗಿ ಈಗ ಮಂಗಳೂರಿಗರು ಬೆಂಗಳೂರನ್ನು ಅವಲಂಬಿಸಿದ್ದಾರೆ) ಹೀಗಾದರೆ ಮಾತ್ರ ಮಂಗಳೂರು ಕಣ್ಣೂರಿನ ವಿಮಾನ ನಿಲ್ದಾಣಕ್ಕೆ ಸೆಡ್ಡು ಹೊಡೆದು ನಿಲ್ಲಲು ಸಾಧ್ಯ . ಇಲ್ಲದಿದ್ದರೆ ಕಣ್ಣೂರು ಐರೋಪ್ಯ ರಾಷ್ಟ್ರಗಳಿಗೆ ಸಂಪರ್ಕ ಒದಗಿಸಿ ಸ್ವತಃ ಮಂಗಳೂರಿಗರನ್ನೇ ಆಕರ್ಷಿಸಿದರೆ ಆಶ್ಚರ್ಯವೇನಿಲ್ಲ.
ಗುರುವಾರ, ಫೆಬ್ರವರಿ 21, 2019
"ಇರುವುದೊಂದೇ ಈ ಜೀವನವು" - ಕವನ 13
ಜಲಪಾತದ ನೀರಿನ ರಭಸದಂತೇ
ಉರುಳಿ ಹೋಗುತಿದೆ ಎನದಿನಗಳು ...
ಮನದಾಸೆಗಳೆಲ್ಲವೂ ತೀರದೆಯೇ
ಜೀವನದಂತ್ಯದ ಸಾಗರ ಸೇರುತಿಹುದು ...
ಮುಂದೆ ಸಾಗುತ್ತಿಲ್ಲ, ಹಿಂದೆ ಬರುವಂತಿಲ್ಲ
ನಡುವಲಿ ನಿಂತಿದೆ ಜೀವನ ನೌಕೆಯೂ ...
ಕನಸ ಕಂಡೇ ಉಳಿದಿರುವೆನು
ದಡ ಸೇರೋ ಗುರಿಯನು ಮರೆತು ...
ಮರೆತೇ ಕಳೆದರೂ, ಬದುಕಿ ಉಳಿದರೂ
ಕಾಲವು ಯಾರನು ಕಾಯದು ...
ಇಂದೇ ಎಂಬುವ ನಂಬಿಕೆ ಹಿಡಿಯದೇ
ಪಯಣವು ಮುಂದೇ ಸಾಗದು ...
ಇರುವುದೊಂದೇ ಈ ಜೀವನವು
ಬರಲೀ ಸಾಧಿಸುವಂಥಹ ಮನಛಲವು...
ಉಳಿದಿರುವುದು ಕೆಲಕ್ಷಣಗಳೂ
ಸಾರ್ಥಕವಾಗುವಂತಾಗಲಿ ಈ ಜನುಮವು...
ಮಂಗಳವಾರ, ಜುಲೈ 3, 2018
ಶನಿವಾರ, ಜೂನ್ 23, 2018
ಮಳೆ "ಕಾಲ - ಚಕ್ರ" - ಕವನ 12
ಓ ಸುಡುವ ಸೂರ್ಯನೇ
ನಿನಗೇಕೆ ಕೋಪವೇ ...
ಬಿಸಿಲ ಬೇಗೆ ನೆಲಕೆ ಬಡಿದು
ಭೂತಾಯಿಯು ನರಳಿದೆ ...
ಓ ಮರಗಿಡ ಬೆಟ್ಟವೇ
ಸುಮ್ಮನೇಕೆ ನಿಂತಿರುವೇ ...
ನೀವು ತಡೆಯದ ತಂಗಾಳಿ
ಊರಬಿಟ್ಟು ಮರೆಯಾಗಿದೆ ...
ಓ ಅಲೆಮಾರಿ ಗಾಳಿಯೇ
ಎನ ವಿಳಾಸವ ಮರೆತೆಯೇ ...
ಕರೆದುಕೊಂಡು ಬಾರೊ ಒಮ್ಮೆ
ಬಿಳಿಮೋಡಗಳ ಹಿಂಡನೇ ...
ಓ ಬೆಳ್ಳಿ ಮೋಡವೇ
ಭೂತಾಯಿಯು ಬೇಡವೆ ...
ಬಿಸಿಲಬೇನೆಗೆ ನರಳೋ ನೋಡಿ
ಕಣ್ ಮಳೆಹನಿಗಳ ಸುರಿಸಿರೆ ...
ಓ ಮಳೆಹನಿಗಳ ಮಾಲೆಯೇ
ನನ್ನ ದೂರ ತಿಳಿಯದೆ ...
ನಿನ್ನ ಬೆರೆತು ಈ ನೆಲವು
ಹಸಿರು ಹಸಿರಾ ಪಸರಿಸೆ ...
ಯಾವುದೊ ಈ ಮಾಯೆಯೋ
ಬಿಸಿಲು ಮಳೆಯ ಜಾಲವೋ ...
ಮಳೆ "ಕಾಲ - ಚಕ್ರ"ದೊಳಗೆ
ಉಕ್ಕಿ ಹರಿಯಲಿ ಏನ ಭಾವನೇ ..
ಗುರುವಾರ, ಮಾರ್ಚ್ 15, 2018
“ಸೋಮಾರಿ ಗಾನ” - ಕವನ 11
ಹೊತ್ತು ಕಳೆದರೇನಂತೇ
ಜೊತೆಗೆ ಬರುವನು ಅವನು ..
ಸುತ್ತ ಇರುವವರ ತಿಳಿಯದೆ
ಎನಬೆನ್ನ ಬಿಡನು ಇವನು ..
ರವಿ ಬಂದರೇನಂತೇ
ಅವನಿಲ್ಲವೇ ನನಗಿಂದು ..
ಹೊತ್ತು ಕಳೆದರೂ ಹೋಗಲಿ
ಹೊಟ್ಟೆಗಿಟ್ಟು ಕೂಡ ಮರೆವೆನು ..
ಸ್ವಚ್ಛವಿಲ್ಲ ಎಂದರೇನಂತೇ
ಬೆಚ್ಚ ಮಲಗ ಬೇಕಿನ್ನು ..
ಎದ್ದು ಹೊರಡಬೇಕೆಂದರೆ
ಮುಗ್ಗರಿಸಿ ಬೀಳುವೆ ನಿನಬಲೆಗೆಂದು ..
ಅರ್ಧ ದಿನವು ನಿನದಾದರೇನಂತೇ
ನಾನಲ್ಲವೆ ನಿನ ಗುಲಾಮನು ..
ಯಾವ ಕೆಲಸವನೇಕೆ ಮಾಡಲಿ
"ಸೋಮಾರಿ" ಎಂದೇಳುವೆ ನಿನ್ನ ಹೆಸರನು ..
ಭಾನುವಾರ, ಫೆಬ್ರವರಿ 18, 2018
“ಗಾಳಿ ಮಾತು” - ಕವನ 10
ಕಣ್ಣ ಸಿಲುಕದ ಗಾಳಿಯೊಂದು
ನುಸುಳಿ ಮನೆಗೆ ಬಂದಿದೆ..
ದಾರಿ ಮರೆತು ಬಂದಂತಿದೆ
ತರಗೆಲೆಗಳು ಅದರ ಜೊತೆಗೆಯೇ..
ಬಟ್ಟೆ ಬರೆಯು ಪುಟಗಳೆಲ್ಲ
ಹೆದರಿಕೊಂಡು ಓಡಿವೆ..
ಇದರ ಸ್ವಾಗತ ಬಯಸಿಕೊಂಡು
ಮರಗಿಡಗಳು ಬಾಗಿವೆ..
ಹಕ್ಕಿ ಹುಳುಗಳು ನಿನ್ನ ಬಗೆಯೆ
ಚೀರಿಕೊಂಡು ಸುತ್ತಿವೆ..
ನಿನ್ನ ತಂಪು ಮಾಡಲೆಂದೆ
ಮಳೆಹನಿಗಳು ಉದಿರಿವೆ..
ನಿನ್ನ ದಯೆಯೊ ನಿನ್ನ ಮಾಯೆಯೊ
ನನಗೊಂದೂ ತಿಳಿಯದು..
ನಿನ್ನ ನಂಬಿಕೊಂಡ ಜಗವು
ಬದುಕುವುದನ್ನ ಕಲಿತಿದೆ..
ಮಂಗಳವಾರ, ಜುಲೈ 4, 2017
“ಜನನ-ಮರಣ” - ಕವನ 9
ನಿದಿರೆಯೆಂಬ ಲೋಕದಲಿ
ನಡೆಯುತ್ತಿದೆ ಹೊಸ ತಿರುವುಗಳು..
ನಡುಗನಸಿನ ಪಾತ್ರದೊಳಗೆ
ನನ್ನನ್ನೊಮ್ಮೆ ಯಾರೋ ಕರೆವರು..
ಕಣ್ತೆರೆದು ನೋಡುತ್ತಿರಲು
ಹೊಸಜಗವ ನಾ ಕಂಡಿಹೆನು..
ಎಲ್ಲೋ ನೋಡಿರುವ ಈಜಗವು
ಹೊಸಬೆಳಕಲಿಂದು ಬೆರೆತಿಹುದು..
ಅಂದು ಕಂಡ ಇದೇ ಭುವಿಯು
ಮಂಜಾ ಮನದಿ ಮೂಡಿಹುದು..
ನಯನಗಳೆರಡು ಮಾಡಿವೆಯೊ ಮೋಡಿ
ನವಲೋಕದಂತಿಂದು ಕಾಣುವುದು..
ಮತ್ತೆ ಮರಣ ಮತ್ತೆ ಜನುಮ
ಪ್ರತಿದಿನವು ನಡೆವುದು..
ಕನಸು ನಿಜವೋ, ಕಣ್ತೆರೆದರೆ ನಿಜವೋ
ತಿಳಿಯದೆ ಮನವು ಕೊರಗುವುದು..
ಹೊಸಲೋಕದಿಂದ ಮತ್ತೆ ಮರಣ
ನಿದಿರೆಯಲೇ ನಾ ಕಳೆದೆನು..
ಮರುಜನನವು ಸಿಗುವುದೊ ನಾತಿಳಿಯೇ
ನಂಬಿಕೆಯೊಂದೆ ಇಲ್ಲಿ ಉಳಿದಿಹುದು..
ಮಂಗಳವಾರ, ಮೇ 23, 2017
7ರ ಮಗ್ಗಿಯಲ್ಲಿ ಜೀವನ ಚಕ್ರದ ಗಮ್ಮತ್ತು - ಟಾಂಗ್-ಕಿಂಗ್ (ಲೇಖನ) 1
7ರ ಮಗ್ಗಿಯಲ್ಲಿ ಜೀವನ ಚಕ್ರದ ಗಮ್ಮತ್ತು*
7 x 1 = 7 ಬಾಲ್ಯ ಪ್ರವೇಶ
7 x 2 = 14 ಯೌವ್ವನ ಪ್ರವೇಶ
7 x 3 = 21 ಪ್ರೀತಿ, ಪ್ರೇಮ, ಪ್ರಣಯ
7 x 4 = 28 ವಿವಾಹ, ಸ೦ತಾನ ಪ್ರಾಪ್ತಿ
7 x 5 = 35 ಸಂಸಾರ ಸಾಗರದಲ್ಲಿ ಈಜು ಸ್ಪರ್ದೆ
7 x 6 = 42 ಮಕ್ಕಳ ಯೌವ್ವನ ಪ್ರವೇಷ
7 x 7 = 49 ಸಂಸಾರದಲ್ಲಿ ರಾಜಕೀಯ, ನಾನು ನನ್ನ ಮನೆಯಲ್ಲಿ ಪರಕೀಯ
7 x 8 = 56 ನಿವೃತ್ತಿ, ಮಾವ ಅಥವಾ ಅಳಿಯ ಆಗುವ ಯೋ (ರೋ) ಗ
7 x 9 = 63 ಅರವತ್ತಕ್ಕೆ ಅರಳು ಮರಳು, ಷಷ್ಟಿ ಪೂರ್ತಿ
7 x 10 = 70 ವಿದಾಯ.!!!
ಸೋ .....ಇರೋ ತನಕ ಜಾಲಿ .ಆಮೇಲೆ ಖಾಲಿ ಊರಿಗೋಂದ್ ಊಟ...ಗೋಡೆಗೊಂದ್.... ಫೋಟೋ. ಅಸ್ಟೆ ಜೀವನ.....
7 x 1 = 7 ಬಾಲ್ಯ ಪ್ರವೇಶ
7 x 2 = 14 ಯೌವ್ವನ ಪ್ರವೇಶ
7 x 3 = 21 ಪ್ರೀತಿ, ಪ್ರೇಮ, ಪ್ರಣಯ
7 x 4 = 28 ವಿವಾಹ, ಸ೦ತಾನ ಪ್ರಾಪ್ತಿ
7 x 5 = 35 ಸಂಸಾರ ಸಾಗರದಲ್ಲಿ ಈಜು ಸ್ಪರ್ದೆ
7 x 6 = 42 ಮಕ್ಕಳ ಯೌವ್ವನ ಪ್ರವೇಷ
7 x 7 = 49 ಸಂಸಾರದಲ್ಲಿ ರಾಜಕೀಯ, ನಾನು ನನ್ನ ಮನೆಯಲ್ಲಿ ಪರಕೀಯ
7 x 8 = 56 ನಿವೃತ್ತಿ, ಮಾವ ಅಥವಾ ಅಳಿಯ ಆಗುವ ಯೋ (ರೋ) ಗ
7 x 9 = 63 ಅರವತ್ತಕ್ಕೆ ಅರಳು ಮರಳು, ಷಷ್ಟಿ ಪೂರ್ತಿ
7 x 10 = 70 ವಿದಾಯ.!!!
ಸೋ .....ಇರೋ ತನಕ ಜಾಲಿ .ಆಮೇಲೆ ಖಾಲಿ ಊರಿಗೋಂದ್ ಊಟ...ಗೋಡೆಗೊಂದ್.... ಫೋಟೋ. ಅಸ್ಟೆ ಜೀವನ.....
ಭಾನುವಾರ, ಏಪ್ರಿಲ್ 2, 2017
“ಸಮಯ ಮತ್ತು ಆಲೋಚನೆ” – ನಿಖರ ಮಾತು 3
ಜೀವನದಲ್ಲಿ ಏನೋ ಮಾಡಬೇಕೆಂಬ ಉತ್ಸಾಹ, ಆದರೆ ಮಾಡುವುದಾದರೂ ಏನು ? ಯಾವುದು ನನ್ನ ಗುರಿ? ನಾನು ತಪ್ಪಾದ ಹಾದಿಯಲ್ಲಿರುವನೇ? ಹೀಗೆ ಹಲವಾರು ಯೋಚನೆಗಳನ್ನ ಮಾಡುತ್ತಾ ಸಮಯ ಕಳೆಯುತಿದ್ದ ನನಗೆ ತಕ್ಷಣ ಮನದಿಂದ ಬಂದ ಉತ್ತರ “ಇಲ್ಲ, ನಿನ್ನ ಹಾದಿ ಸರಿಯಾಗಿದೆ, ಏನೋ ನಿನ್ನಿಂದಾಗಬೇಕು ಅದಕ್ಕೆ ಇಲ್ಲಿದ್ದೀಯ, ಅದು ಆಗುವುದಂತು ನಿಜ, ನಿನ್ನ ಪ್ರಯತ್ನ ಹಾಗು ಚಟುವಟಿಕೆಗಳನ್ನು ಬಿಡಬೇಡ.”
ಹೌದಲ್ಲವೆ?, ಇದು ನಿಜವೆಂದು ಅನಿಸತೊಡಗಿತು. ತಕ್ಷಣವೆ ಮನಸ್ಸನ್ನು ಬೇರೊಂದು ಚಟುವಟಿಕೆಗಳಲ್ಲಿ ಮಗ್ನನಾಗಿರಸುವಂತೆ ಮಾಡಿತು. ಪ್ರತಿದಿನದ ವ್ಯಾಯಾಮ, ದಿನಕ್ಕೆ ಸ್ವಲ್ಪ ಪುಸ್ತಕ ಓದುವುದು, ಅಡುಗೆ ಮಾಡುವುದು, ಕೊಂಚ ಹೊಸ ಭಾಷೆ ಅಥವಾ ವಿಷಯಗಳನ್ನು ಕಲಿಯುವುದು ಇಲ್ಲವೇ ಕವಿತೆ-ಲೇಖನಗಳನ್ನ ಬರೆಯುವುದು ಹೀಗೆ ಏನಾದರೂ ಚಟುವಟಿಕೆಗಳಲ್ಲಿ ತೊಡಗಿರುವ ನಾನು ಎಲ್ಲೋ ಗುರಿ ತಲುಪಲು ಇವುಗಳು ಸಹಾಯ ಮಾಡುವುದೆಂಬ ನಂಬಿಕೆ. ಸಮಯವನ್ನು ಬಳಸಿರಿ ಇಲ್ಲವೇ ಹಾಗೆ ಕಳೆಯಿರಿ, ಖಂಡಿತವಾಗಿಯೂ ಸಮಯವಂತು ನಿಮಗಾಗಿ ನಿಲ್ಲುವುದಿಲ್ಲ. ನಮ್ಮ ಜೀವನದ ಈ ಸಮಯವನ್ನು ಹಾಗೆಯೇ ಕಳೆಯುವುದರ ಬದಲು ಏನಾದರೂ ಮಾಡುತ್ತಾ ಕಳೆಯುವ ಅಂತ ಈ ರೀತಿ ಚಟುವಟಿಕೆಗಳಿಗೆ ಮುನ್ನುಡಿ ಹಾಕಿದೆ. ಪ್ರತಿಯೊಂದು ಕಾರ್ಯಕ್ಕೂ ಪ್ರತಿಫಲ ಸಿಗುವುದೋ ಇಲ್ಲವೋ, ಸಮಯವೆಂಬ ಅಮೂಲ್ಯ ಮೂಲಭೂತವನ್ನು ಬಳಸಿದೆನೆಂಬ ನೆಮ್ಮದಿ ದೊರೆಯುವುದು.
ಯಾವುದೋ ಒಂದು ಮಾದ್ಯಮದಲ್ಲಿ ತುಂಬಾ ಒಳ್ಳೆಯ ವಾಕ್ಯವೊಂದನ್ನು ಕಂಡೆನು. “ಸಾಧ್ಯ ಹಾಗು ಅಸಾಧ್ಯ ಇವೆರಡು ಕೂಡ ಸರಿಯಾದದ್ದೆ”, ಇದರ ಬಗ್ಗೆ ಯೋಚಿಸಿದಾಗ ನನಗೆ ತೋಚಿದ್ದು “ಹೌದು”. ಯಾವುದೇ ವಿಷಯದ ಆಯ್ಕೆಯು ಒಂದು ನಿರ್ದಿಷ್ಟ ಹಾದಿಯನ್ನು ತೋರಿಸುವುದು, “ಸಾಧ್ಯ”ವೆಂದರೆ ಅದೊಂದು ಹಾದಿಯಾದರೆ “ಅಸಾಧ್ಯ”ವೆಂಬುದು ಇನ್ನೊಂದು ಹಾದಿಯಲ್ಲಿ ಕರೆದುಕೊಂಡು ಹೋಗುವುದು. ಈಗೆ ಯೋಚಿಸುತ್ತಾ ಆಲೋಚನೆಗಳು ಎಷ್ಟು ಆಳಕ್ಕೆ ಹೋಯಿತೆಂದರೆ “ಇಲ್ಲಿ ಯಾವುದು ಕೂಡ ತಪ್ಪಲ್ಲ, ಎಲ್ಲವೂ ಸರಿ” ಎಂಬ ನಿರ್ಧಾರಕ್ಕೆ ಬರುವಂತೆ ಮಾಡಿತು. ಎಲ್ಲಾ ವಿಷಯಗಳಿಗೂ ಅದರದೇ ಆದಂತಹ ಅರ್ಥವಿರುವುದೆಂದು ಅರಿವಾಯಿತು. ಕೆಲವೊಮ್ಮೆ ಕೆಲವರ ಕೆಲವು ಮಾತುಗಳು ಕೂಡ ಸರಿಯಿಲ್ಲವೆಂದು ಎನಿಸುವುದುಂಟು, ಖಂಡಿತವಾಗಿಯೂ ಅದು ಬೇರೊಂದು ಬಗೆಯಲ್ಲಿ ಸರಿಯಾಗೇ ಇರಬಹುದು. ಎಲ್ಲಾ ಅವರವರ ಯೋಚನೆಗೆ ಬಿಟ್ಟದ್ದು. ಯೋಚನೆಗಳ ಆಳವು ಅನಂತವೆಂಬುದನ್ನು ನಾನು ತಿಳಿದುಕೊಂಡೆ.
ಈ ಮೆದುಳು ಎಂಬುವ ಜೀವಿಯಲ್ಲಿರುವ ಅದ್ಭುತ ಅಂಗ, ಕೆಲ ವಿದ್ಯುತ್ ಸಂದೇಶಗಳಲ್ಲಿ ಏನೇನೋ ಬದಲಾಯಿಸಿಬಿಡುತ್ತದೆ. ಹೀಗೆ ಯೋಚನೆಗಳಲ್ಲಿ ಮಗ್ನರಾಗಿರುವ ನಾನು ನನ್ನ ಗುರಿಯ ಚಿತ್ರಣ ನೋಡುವ ಸಮಯವು ತುಂಬಾ ಹತ್ತರದಲ್ಲಿರುವುದು, ಕೆಲದಿನಗಳೇ ಬಾಕಿ ಇದೆ ಅಂತ ಈ ಮನಕ್ಕೆ ಮುನ್ಸೂಚನೆ ಕೊಡುತ್ತಾ ಇರುತ್ತೆ. ನನ್ನಲ್ಲಿರುವ ಈ ಛಲ, ಶಕ್ತಿ ಎಲ್ಲಾದರೂ ಬಳಸಿ ಏನಾದರೂ ಬದಲಾವಣೆಗೆ ಕ್ರಾಂತಿ ಹೂಡಬೇಕೆಂಬ ತವಕದಲ್ಲೇ ಇರುವೆನು. ಯಾರಿಗೆ ಗೊತ್ತು! ಇವೆಲ್ಲವು ವಯಸ್ಸಿನ ಮಾಯೆಯೋ ಇಲ್ಲವೆ ಮನಸಿನ ಆಟವೇ! ಆದರೆ ಪ್ರತಿದಿನವು ಅದೇ ಶಕ್ತಿ, ಅದೇ ಛಲ ನನ್ನನ್ನು ಹುಮ್ಮಸ್ಸಿನಿಂದ ಇರಲು ಸಹಾಯ ಮಾಡುತ್ತಿರುತ್ತೆ. “ತಾಳ್ಮೆಯೊಂದಿದ್ದರೆ ಎಲ್ಲವೂ ಸಿಗುವುದು” ಎಂದು ಹೇಳಿರುವ ನಮ್ಮ ಹಿರಿಯರು, ಅವರ ಮಾತಿಗೆ ಬೆಲೆ ನೀಡಿ ತಾಳ್ಮೆಯಿಂದಲೇ ಎಲ್ಲವ ಅನುಸರಿಸಿ ಹೊಗುತ್ತಿರುವೆನು. ಸಾಧನೆಯೇ ಜೀವನದ ಗುರಿಯಿಲ್ಲದಿರಬಹುದು,ಆದರೆ ನಮ್ಮ ಜೀವನಕ್ಕೆ ಅರ್ಥ ಕಲ್ಪಿಸುವುದು ನಮ್ಮದೇ ಜವಬ್ದಾರಿಯಾಗಿರುವುದರಿಂದ ಆ ಅರ್ಥವನ್ನು ಕಟ್ಟುವ ಪ್ರಯತ್ನವು, ಬೆಳೆಸುವ ಶಕ್ತಿಯೂ ಸಿಗಲಿ ಅಂತ ಸಂಕಲ್ಪಿಸತ್ತಾ ಇಂದಿನಿಂದಲೇ ಸಮಯದ ಜೊತೆಯಲ್ಲೇ ಆಲೋಚನೆಗಳ ಸಾಗರದಲ್ಲಿ ಈಜುವ ಎಂಬುದು ನನ್ನ ಆಶಯ.








