ಮಂಗಳವಾರ, ಜುಲೈ 4, 2017

“ಜನನ-ಮರಣ” - ಕವನ 9











ನಿದಿರೆಯೆಂಬ ಲೋಕದಲಿ
ನಡೆಯುತ್ತಿದೆ ಹೊಸ ತಿರುವುಗಳು..
ನಡುಗನಸಿನ ಪಾತ್ರದೊಳಗೆ
ನನ್ನನ್ನೊಮ್ಮೆ ಯಾರೋ ಕರೆವರು..


ಕಣ್ತೆರೆದು ನೋಡುತ್ತಿರಲು
ಹೊಸಜಗವ ನಾ ಕಂಡಿಹೆನು..
ಎಲ್ಲೋ ನೋಡಿರುವ ಈಜಗವು
ಹೊಸಬೆಳಕಲಿಂದು ಬೆರೆತಿಹುದು..


ಅಂದು ಕಂಡ ಇದೇ ಭುವಿಯು
ಮಂಜಾ ಮನದಿ ಮೂಡಿಹುದು..
ನಯನಗಳೆರಡು ಮಾಡಿವೆಯೊ ಮೋಡಿ
ನವಲೋಕದಂತಿಂದು ಕಾಣುವುದು..


ಮತ್ತೆ ಮರಣ ಮತ್ತೆ ಜನುಮ
ಪ್ರತಿದಿನವು ನಡೆವುದು..
ಕನಸು ನಿಜವೋ, ಕಣ್ತೆರೆದರೆ ನಿಜವೋ
ತಿಳಿಯದೆ ಮನವು ಕೊರಗುವುದು..


ಹೊಸಲೋಕದಿಂದ ಮತ್ತೆ ಮರಣ
ನಿದಿರೆಯಲೇ ನಾ ಕಳೆದೆನು..
ಮರುಜನನವು ಸಿಗುವುದೊ ನಾತಿಳಿಯೇ
ನಂಬಿಕೆಯೊಂದೆ ಇಲ್ಲಿ ಉಳಿದಿಹುದು..

ಮಂಗಳವಾರ, ಮೇ 23, 2017

7ರ ಮಗ್ಗಿಯಲ್ಲಿ ಜೀವನ ಚಕ್ರದ ಗಮ್ಮತ್ತು - ಟಾಂಗ್-ಕಿಂಗ್ (ಲೇಖನ) 1

7ರ ಮಗ್ಗಿಯಲ್ಲಿ ಜೀವನ ಚಕ್ರದ ಗಮ್ಮತ್ತು*


7 x 1 = 7 ಬಾಲ್ಯ ಪ್ರವೇಶ
7 x 2 = 14  ಯೌವ್ವನ ಪ್ರವೇಶ
7 x 3 = 21  ಪ್ರೀತಿ, ಪ್ರೇಮ, ಪ್ರಣಯ
7 x 4 = 28  ವಿವಾಹ, ಸ೦ತಾನ ಪ್ರಾಪ್ತಿ
7 x 5 = 35  ಸಂಸಾರ ಸಾಗರದಲ್ಲಿ ಈಜು ಸ್ಪರ್ದೆ
7 x 6 = 42  ಮಕ್ಕಳ ಯೌವ್ವನ ಪ್ರವೇಷ
7 x 7 = 49  ಸಂಸಾರದಲ್ಲಿ ರಾಜಕೀಯ, ನಾನು ನನ್ನ ಮನೆಯಲ್ಲಿ ಪರಕೀಯ
7 x 8 = 56  ನಿವೃತ್ತಿ, ಮಾವ ಅಥವಾ ಅಳಿಯ ಆಗುವ ಯೋ (ರೋ) ಗ
7 x 9 = 63  ಅರವತ್ತಕ್ಕೆ ಅರಳು ಮರಳು, ಷಷ್ಟಿ ಪೂರ್ತಿ
7 x 10 = 70 ವಿದಾಯ.!!!
ಸೋ .....ಇರೋ ತನಕ ಜಾಲಿ .ಆಮೇಲೆ ಖಾಲಿ ಊರಿಗೋಂದ್ ಊಟ...ಗೋಡೆಗೊಂದ್.... ಫೋಟೋ. ಅಸ್ಟೆ ಜೀವನ..... 

ಭಾನುವಾರ, ಏಪ್ರಿಲ್ 2, 2017

“ಸಮಯ ಮತ್ತು ಆಲೋಚನೆ” – ನಿಖರ ಮಾತು 3



ಜೀವನದಲ್ಲಿ ಏನೋ ಮಾಡಬೇಕೆಂಬ ಉತ್ಸಾಹ, ಆದರೆ ಮಾಡುವುದಾದರೂ ಏನು ? ಯಾವುದು ನನ್ನ ಗುರಿ? ನಾನು ತಪ್ಪಾದ ಹಾದಿಯಲ್ಲಿರುವನೇ? ಹೀಗೆ ಹಲವಾರು ಯೋಚನೆಗಳನ್ನ ಮಾಡುತ್ತಾ ಸಮಯ ಕಳೆಯುತಿದ್ದ ನನಗೆ ತಕ್ಷಣ ಮನದಿಂದ ಬಂದ ಉತ್ತರ “ಇಲ್ಲ, ನಿನ್ನ ಹಾದಿ ಸರಿಯಾಗಿದೆ, ಏನೋ ನಿನ್ನಿಂದಾಗಬೇಕು ಅದಕ್ಕೆ ಇಲ್ಲಿದ್ದೀಯ, ಅದು ಆಗುವುದಂತು ನಿಜ, ನಿನ್ನ ಪ್ರಯತ್ನ ಹಾಗು ಚಟುವಟಿಕೆಗಳನ್ನು ಬಿಡಬೇಡ.”

ಹೌದಲ್ಲವೆ?, ಇದು ನಿಜವೆಂದು ಅನಿಸತೊಡಗಿತು. ತಕ್ಷಣವೆ ಮನಸ್ಸನ್ನು ಬೇರೊಂದು ಚಟುವಟಿಕೆಗಳಲ್ಲಿ ಮಗ್ನನಾಗಿರಸುವಂತೆ ಮಾಡಿತು. ಪ್ರತಿದಿನದ ವ್ಯಾಯಾಮ, ದಿನಕ್ಕೆ ಸ್ವಲ್ಪ ಪುಸ್ತಕ ಓದುವುದು, ಅಡುಗೆ ಮಾಡುವುದು, ಕೊಂಚ ಹೊಸ ಭಾಷೆ ಅಥವಾ ವಿಷಯಗಳನ್ನು ಕಲಿಯುವುದು ಇಲ್ಲವೇ ಕವಿತೆ-ಲೇಖನಗಳನ್ನ ಬರೆಯುವುದು ಹೀಗೆ ಏನಾದರೂ ಚಟುವಟಿಕೆಗಳಲ್ಲಿ ತೊಡಗಿರುವ ನಾನು ಎಲ್ಲೋ ಗುರಿ ತಲುಪಲು ಇವುಗಳು ಸಹಾಯ ಮಾಡುವುದೆಂಬ ನಂಬಿಕೆ. ಸಮಯವನ್ನು ಬಳಸಿರಿ ಇಲ್ಲವೇ ಹಾಗೆ ಕಳೆಯಿರಿ, ಖಂಡಿತವಾಗಿಯೂ ಸಮಯವಂತು ನಿಮಗಾಗಿ ನಿಲ್ಲುವುದಿಲ್ಲ. ನಮ್ಮ ಜೀವನದ ಈ ಸಮಯವನ್ನು ಹಾಗೆಯೇ ಕಳೆಯುವುದರ ಬದಲು ಏನಾದರೂ ಮಾಡುತ್ತಾ ಕಳೆಯುವ ಅಂತ ಈ ರೀತಿ ಚಟುವಟಿಕೆಗಳಿಗೆ ಮುನ್ನುಡಿ ಹಾಕಿದೆ. ಪ್ರತಿಯೊಂದು ಕಾರ್ಯಕ್ಕೂ ಪ್ರತಿಫಲ ಸಿಗುವುದೋ ಇಲ್ಲವೋ, ಸಮಯವೆಂಬ ಅಮೂಲ್ಯ ಮೂಲಭೂತವನ್ನು ಬಳಸಿದೆನೆಂಬ ನೆಮ್ಮದಿ ದೊರೆಯುವುದು.

ಯಾವುದೋ ಒಂದು ಮಾದ್ಯಮದಲ್ಲಿ ತುಂಬಾ ಒಳ್ಳೆಯ ವಾಕ್ಯವೊಂದನ್ನು ಕಂಡೆನು. “ಸಾಧ್ಯ ಹಾಗು ಅಸಾಧ್ಯ ಇವೆರಡು ಕೂಡ ಸರಿಯಾದದ್ದೆ”, ಇದರ ಬಗ್ಗೆ ಯೋಚಿಸಿದಾಗ ನನಗೆ ತೋಚಿದ್ದು “ಹೌದು”. ಯಾವುದೇ ವಿಷಯದ ಆಯ್ಕೆಯು ಒಂದು ನಿರ್ದಿಷ್ಟ ಹಾದಿಯನ್ನು ತೋರಿಸುವುದು, “ಸಾಧ್ಯ”ವೆಂದರೆ ಅದೊಂದು ಹಾದಿಯಾದರೆ “ಅಸಾಧ್ಯ”ವೆಂಬುದು ಇನ್ನೊಂದು ಹಾದಿಯಲ್ಲಿ ಕರೆದುಕೊಂಡು ಹೋಗುವುದು. ಈಗೆ ಯೋಚಿಸುತ್ತಾ ಆಲೋಚನೆಗಳು ಎಷ್ಟು ಆಳಕ್ಕೆ ಹೋಯಿತೆಂದರೆ “ಇಲ್ಲಿ ಯಾವುದು ಕೂಡ ತಪ್ಪಲ್ಲ, ಎಲ್ಲವೂ ಸರಿ” ಎಂಬ ನಿರ್ಧಾರಕ್ಕೆ ಬರುವಂತೆ ಮಾಡಿತು. ಎಲ್ಲಾ ವಿಷಯಗಳಿಗೂ ಅದರದೇ ಆದಂತಹ ಅರ್ಥವಿರುವುದೆಂದು ಅರಿವಾಯಿತು. ಕೆಲವೊಮ್ಮೆ ಕೆಲವರ ಕೆಲವು ಮಾತುಗಳು ಕೂಡ ಸರಿಯಿಲ್ಲವೆಂದು ಎನಿಸುವುದುಂಟು, ಖಂಡಿತವಾಗಿಯೂ ಅದು ಬೇರೊಂದು ಬಗೆಯಲ್ಲಿ ಸರಿಯಾಗೇ ಇರಬಹುದು. ಎಲ್ಲಾ ಅವರವರ ಯೋಚನೆಗೆ ಬಿಟ್ಟದ್ದು. ಯೋಚನೆಗಳ ಆಳವು ಅನಂತವೆಂಬುದನ್ನು ನಾನು ತಿಳಿದುಕೊಂಡೆ.

ಈ ಮೆದುಳು ಎಂಬುವ ಜೀವಿಯಲ್ಲಿರುವ ಅದ್ಭುತ ಅಂಗ, ಕೆಲ ವಿದ್ಯುತ್ ಸಂದೇಶಗಳಲ್ಲಿ ಏನೇನೋ ಬದಲಾಯಿಸಿಬಿಡುತ್ತದೆ. ಹೀಗೆ ಯೋಚನೆಗಳಲ್ಲಿ ಮಗ್ನರಾಗಿರುವ ನಾನು ನನ್ನ ಗುರಿಯ ಚಿತ್ರಣ ನೋಡುವ ಸಮಯವು ತುಂಬಾ ಹತ್ತರದಲ್ಲಿರುವುದು, ಕೆಲದಿನಗಳೇ ಬಾಕಿ ಇದೆ ಅಂತ ಈ ಮನಕ್ಕೆ ಮುನ್ಸೂಚನೆ ಕೊಡುತ್ತಾ ಇರುತ್ತೆ. ನನ್ನಲ್ಲಿರುವ ಈ ಛಲ, ಶಕ್ತಿ ಎಲ್ಲಾದರೂ ಬಳಸಿ ಏನಾದರೂ ಬದಲಾವಣೆಗೆ ಕ್ರಾಂತಿ ಹೂಡಬೇಕೆಂಬ ತವಕದಲ್ಲೇ ಇರುವೆನು. ಯಾರಿಗೆ ಗೊತ್ತು! ಇವೆಲ್ಲವು ವಯಸ್ಸಿನ ಮಾಯೆಯೋ ಇಲ್ಲವೆ ಮನಸಿನ ಆಟವೇ! ಆದರೆ ಪ್ರತಿದಿನವು ಅದೇ ಶಕ್ತಿ, ಅದೇ ಛಲ ನನ್ನನ್ನು ಹುಮ್ಮಸ್ಸಿನಿಂದ ಇರಲು ಸಹಾಯ ಮಾಡುತ್ತಿರುತ್ತೆ. “ತಾಳ್ಮೆಯೊಂದಿದ್ದರೆ ಎಲ್ಲವೂ ಸಿಗುವುದು” ಎಂದು ಹೇಳಿರುವ ನಮ್ಮ ಹಿರಿಯರು, ಅವರ ಮಾತಿಗೆ ಬೆಲೆ ನೀಡಿ ತಾಳ್ಮೆಯಿಂದಲೇ ಎಲ್ಲವ ಅನುಸರಿಸಿ ಹೊಗುತ್ತಿರುವೆನು. ಸಾಧನೆಯೇ ಜೀವನದ ಗುರಿಯಿಲ್ಲದಿರಬಹುದು,ಆದರೆ ನಮ್ಮ ಜೀವನಕ್ಕೆ ಅರ್ಥ ಕಲ್ಪಿಸುವುದು ನಮ್ಮದೇ ಜವಬ್ದಾರಿಯಾಗಿರುವುದರಿಂದ ಆ ಅರ್ಥವನ್ನು ಕಟ್ಟುವ ಪ್ರಯತ್ನವು, ಬೆಳೆಸುವ ಶಕ್ತಿಯೂ ಸಿಗಲಿ ಅಂತ ಸಂಕಲ್ಪಿಸತ್ತಾ ಇಂದಿನಿಂದಲೇ ಸಮಯದ ಜೊತೆಯಲ್ಲೇ ಆಲೋಚನೆಗಳ ಸಾಗರದಲ್ಲಿ ಈಜುವ ಎಂಬುದು ನನ್ನ ಆಶಯ.

ಬುಧವಾರ, ಫೆಬ್ರವರಿ 22, 2017

“ಹೊಸ ಅನುಭವ” - ಕವನ 8



ಮುಂಜಾನೆಯು ಹೊಸತಾದಂತಿದೆ..
ಸೂರ್ಯಕಿರಣವು ತಿಳಿಯಾಗಿದೆ..
ತಂಗಾಳಿಯ ರಭಸಕೆ ತಾಕಿದ ದೇಹವು
ಮೆಲ್ಲನೆ ರೋಮಾಂಚನಗೊಂಡಿದೆ….

ಎಲೆಗಳು ಕುಣಿದಂತಿದೆ..
ಹಕ್ಕಿಗಳು ಖುಷಿಯಾಗಿದೆ..
ಕನಸ ಕಾಣುವ ಕಣ್ಣಿಗೆ ಎಲ್ಲವು
ಇಂದು ಸೊಗಸಾಗಿ ಕಂಡಿದೆ….

ಸಮಯ ಬದಲಾದಂತಿದೆ..
ದಿನವೂ ಹಸಿರಾಗಿದೆ..
ಇವುಗಳ ನಡುವಿನ ನನ್ನ ಜೀವನ
ಹೊಸ ಅನುಭವವ ಪಡೆದಿದೆ….

ಶುಕ್ರವಾರ, ಜನವರಿ 27, 2017

“ಕನಸಿನ ಲೋಕದಲಿ” – ನಿಖರ ಮಾತು 2



ಕನಸ್ಸು, ಇದೊಂದು ವಿಚಿತ್ರ ಹಾಗು ಸೋಜಿಗವಾದ ಪ್ರಕ್ರಿಯೆ, ಎಲ್ಲಾ ಮನುಷ್ಯರೂ ಹಾಗು ಜೀವಿಗಳಲ್ಲೂ ಕಾಣಬಹುದಂತಹ ವಿಶೇಷ ಶಕ್ತಿ ಎಂದೆನಬಹುದು. ಕನಸೆಂಬ ಪದಕ್ಕೆ ಅರ್ಥವನ್ನು ಹುಡುಕುತ್ತಾ ಹೋದರೆ ಹಲವಾರು ಕಲ್ಪನೆಗಳು ಮನಸ್ಸಿಗೆ ಮೂಡುತ್ತದೆ. ರಾತ್ರಿ ಮಲಗಿದರೆ ನಿದಿರೆಯಲಿ ಕನಸ್ಸು, ಬೆಳಿಗ್ಗೆ ಎದ್ದರೆ ಹಗಲುಗನಸು, ಭವಿಷ್ಯದ ಬಗ್ಗೆಯ ಹಲವಾರು ಕನಸುಗಳು ಹೀಗೆ ಇದೊಂದು ಕೊನೆಯಿಲ್ಲದ ಹಾಗು ಜೀವನದಲ್ಲಿ ಹೆಚ್ಚುಕಾಲ ಕಳೆಯುವಂತಹ ಲೋಕ, “ಕನಸಿನ ಲೋಕ”.

ಕನಸಲಿ ಇಲ್ಲದನ್ನು ಪಡೆಯಬಹುದು, ಆಗದನ್ನೂ ಸಾಧಿಸಬಹುದು, ಆದರೆ ಇದು ಕಾಲ್ಪನಿಕವಷ್ಟೆ. ಈ ರೀತಿ ಕನಸುಗಳನ್ನು ಕಾಣುತ್ತಿರುವ ನಾವು ನಿಜವಾಗಿ ಎಚ್ಚರವಿರುವುದೇ ಕೆಲವು ಕ್ಷಣಗಳು ಮಾತ್ರ. ಎಷ್ಟೇ ಪ್ರಯತ್ನಪಟ್ಟು ವರ್ತಮಾನಕಾಲಕ್ಕೆ ಬಂದರೂ ಕೆಲಕ್ಷಣದಲ್ಲೇ ನಮ್ಮದೆ ಆದಂತಹ ಕಾಲ್ಪನಿಕ ಲೋಕಕ್ಕೆ ಹೋಗಿಬಿಡುತ್ತೇವೆ. ಇದೊಂತರಹದ ಕನಸ್ಸಾದರೆ ಜೀವನದಲ್ಲಿ ಸಾಧಿಸುವ, ಗುರಿ ತಲುಪುವ ಕನಸ್ಸು ಇನ್ನೊಂದು.

ಸಾಧಿಸಬೇಕು ಎಂಬ ಕನಸ್ಸು ಅದು ನಮ್ಮ ಗುರಿಯನ್ನು ತೋರಿಸುತ್ತದೆ. ಕನಸ್ಸೆಂಬುದು ಮುನ್ನುಡಿಯಷ್ಟೇ, ಆದರೆ ಇಡೀ ಜೀವನವೆಂಬ ಪುಸ್ತಕವನ್ನು ನಾವೇ ಬರೆಯುವ ಪ್ರಯತ್ನ ಮಾಡಬೇಕು. ಆಗ ಮಾತ್ರ ಕನಸ್ಸೆಂಬುದನ್ನು ನನಸ್ಸಾಗುವ ದಾರಿಯಲಿ ಸಾಗಿಸಬಹುದು. ಆದರೆ ನಾವು ಮುನ್ನುಡಿ ಬರೆಯುತ್ತಾ ಪುಸ್ತಕ ಖಾಲಿ ಉಳಿಸಿದರೆ ಕನಸ್ಸಿಗೆ ಬೆಲೆಯಾದರು ಎಲ್ಲಿರುವುದು. ಕನಸಿನ ಜೊತೆ ಪ್ರಯತ್ನವು ಹಾಗು ಜೀವನವೆಂಬ ಪುಸ್ತಕವನ್ನು ಬರೆಯುವ ಸಾಹಸವ ಮಾಡುವುದು ಮುಖ್ಯ.ಇವೆರಡರ ಹೊರತು ಕನಸ್ಸು ಕನಸ್ಸಾಗಿಯೆ ಉಳಿದಿರುವುದು. ಇಲ್ಲವಾದಲ್ಲಿ ಬದುಕಿನ ಕೊನೆಯ ಪುಟ ಬಂದಾಗಲು ಇಡೀ ಪುಸ್ತಕವು ಖಾಲಿಯಾಗಿಯೇ ಉಳಿದಿರುತ್ತದೆ. ಆದರೆ ನಮ್ಮಂತಹ ಯುವಜನತೆಯಲ್ಲಿ “ಪ್ರಯತ್ನ” ಹಾಗೂ “ಸಾಹಸ”ದ ಕೊರತೆಯೇ ಇರುವುದು ಹೊರತು ಕನಸ್ಸುಗಳುಂಟು ನೂರೆಂಟು.

ಒಂದು ಮಗು ಶಾಲೆಗೆ ಹೋಗುವಾಗ “ನಾನು ಬಸ್ಸ್ ಚಾಲಕನಾಗಬೇಕು” ಎಂದು, “ಶಿಕ್ಷಕಿ” ಯಾಗಬೇಕೆಂದು ಇಲ್ಲವೇ “ಪೋಲೀಸ್ ಆಗುವೆ” ಎಂದು ಕನಸ್ಸು ಕಂಡಿರುತ್ತದೆ. ವಯಸ್ಸಿನಲಿ ದೊಡ್ಡವನಾಗುತ್ತಿದ್ದಂತೆ ಕನಸುಗಳು ಗೌರವದ ರೂಪದಲ್ಲೋ ಇಲ್ಲವೇ ಹಣ-ಅಂತಸ್ತಿನ ರೂಪದಲ್ಲಿ ಪರಿವರ್ತನೆಗೊಳ್ಳುತ್ತೆ. ಆದ್ದರಿಂದ ರೈತರ ಸಂಖ್ಯೆ ಕಡಿಮೆಯಾಗುತ್ತಾ ಕೃಷಿವೆಂಬುವ ಮಾನವನಿಗೆ ಆಧಾರವಾದ ಉದ್ಯೋಗವು ಅಂತ್ಯಗೊಳ್ಳುತ್ತರುವುದಲ್ಲದೆ ಬರೀ ಇಂಜಿನೀಯರ್ ಹಾಗು ಡಾಕ್ಟರ್ಗಳ ಸಂಖ್ಯೆ ಹೆಚ್ಚಾಗಲು ಒಂದು ಕಾರಣವಾಗಿದೆ. ಇದರ ಫಲ “ನಿರುದ್ಯೋಗ”. ಹೀಗೆ ಕನಸುಗಳು ಗೌರವ ಹಾಗು ಹಣ-ಅಂತಸ್ತಿನ ಪಾಲಗುತ್ತದೆಯೋ ಆ ಸ್ವಾರ್ಥಭಾವನೆ ಜೀವನದಲ್ಲಿ ಇವೆರಡು ಎಷ್ಟೇ ಲಭಿಸಿದರೂ ಅಸಂಪೂರ್ಣದ ಅರಿವು ಮೂಡಿ ಮನಸಿಗೆ ಜಿಗುಪ್ಸೆಯನ್ನುಂಟು ಮಾಡುತ್ತದೆ. ಅದಲ್ಲದೆ ಎಲ್ಲಾ ಇಂಜಿನೀಯರ್ ಹಾಗು ಡಾಕ್ಟರ್ ಗಳು ಸಾರ್ಥಿಗಳೆಂದು ಹೇಳಲು ಸಾಧ್ಯವಿಲ್ಲ, ಸಾಧಿಸುವ ಮನವುಳ್ಳರೂ ಇರುವರು.

ರಾತ್ರಿ ಬೀಳುವ ಕನಸಿಗೂ ಜೀವನದ ಕನಸಿಗೂ ಏನೋ ಸಂಭಂದ ಇದೆ, ಅದೇನಂದರೆ ಎಲ್ಲಾ ರಾತ್ರಿ ಬೀಳುವ ಕನಸ್ಸು ಮುಂಜಾನೆ ಏಳುವಾಗ ನೆನಪಲ್ಲಿರದು. ಹಾಗೆಯೇ ಜೀವನದಲ್ಲಿ ಕಾಣುತ್ತಿರುವ ಕನಸುಗಳನ್ನು ಒಂದು ಕಡೆಯಿಂದ ಮರೆಯುತ್ತಾ ಬರುತ್ತೇವೆ. “ಕನಸು ಕಾಣಿರಿ” ಎಂದು ಹೇಳಿದ ಅಬ್ದುಲ್ ಕಲಾಂರವರ ಮಾತುಗಳನ್ನು ಅನ್ಯರ್ಥ ಮಾಡಿಕೊಂಡ ನಮ್ಮ ಯುವಕರು “ಕಾಣುವ ಕನಸ್ಸು ನೀವು ಮಲಗಿದರೂ ನಿದಿರೆಯನ್ನು ಮಾಡಬಿಡದೆ ಕಾಡುತ್ತಿರಬೇಕು” ಎಂಬುವ ಉಳಿದ ಮಾತನ್ನು ಅರಿಯದೇ ನಿದ್ದೆ ಮಾಡುತ್ತಾ ಕನಸ್ಸನ್ನು ಕಾಣಲು ಶುರುಮಾಡಿದ್ದರೆ. ಏನೊಂದು ವಿಪರ್ಯ್ಯಸ.

ಯಾವುದೇ ಸಾಧನೆಗೆ ಕನಸ್ಸು ಮುಖ್ಯ, ಇಲ್ಲವಾದಲ್ಲಿ ಈ ಆಧುನಿಕ ಯುಗವು ಈ ಮಟ್ಟಿಗೆ ತಲುಪಿರುವುದಲ್ಲಿ ಅನುಮಾನ ಪಡಬೇಕಾದೀತು. ಎಂತಹ ಕನಸ್ಸುಗಳಿರಲಿ ಪ್ರಯತ್ನವಂಬುದು ನಡೆಯಲೇಬೇಕು. ಗೆಲುವನ್ನು ಕಾಣುವುದು ಕನಸ್ಸಾಗಿರಬೇಕು ಹೊರತು ಸೋಲು ಬಾರದಿರಲಿ ಎಂಬುವ ಕನಸ್ಸ ನೆನೆಯಬೇಡಿ. ಸೋಲೆಂಬುದು ಗುರುವಿದ್ದಂತೆ, ಜೀವನ ಪಾಠ ಕಲಿಸುತ್ತದೆ. ಇದನ್ನರಿಯದ ಹಲವರು ಸೋಲು ಬರದಿರಲಿ ಎನ್ನುತ್ತಾ ಒಮ್ಮೆ ಸೋತೊಡನೆ ಆ ಅಧ್ಬುತ ಕನಸ್ಸನ್ನೇ ಕೈಬಿಡುವರು. ಸೋಲು ಎಷ್ಟೇ ಆಗಲಿ ಗೆಲುವೇ ಪರಮ ಲಕ್ಷ್ಯ ಎಂದರಿತರೆ ಗುರಿ ಮುಟ್ಟುವುದರಲ್ಲಿ ಅನುಮಾನವೇ ಇಲ್ಲವೆಂಬುವ ನನ್ನ ಅಭಿಪ್ರಾಯ.

ಒಡನಾಡಿಗಳೇ,
ಕನಸ್ಸೆಂಬ ಶಿಖರದಲಿ,
ಪ್ರಯತ್ನಗಳ ಸುರಿಮಾಲೆಯಿರಲಿ..
ಕಷ್ಟಗಳೇ ಕಲ್ಲುಮುಳ್ಳುಗಳಿಲ್ಲಿ,
ಸೋಲಿಗೆ ಬಗ್ಗದಿರಲಿ,
ಏನೇ ಆಗಲೀ,
ಈ ಜೀವನ ಗುರಿಯನ್ನು ತಲುಪಲಿ….