ಕರಾವಳಿ ಪ್ರದೇಶದ ಜನರ ದೀರ್ಘಕಾಲದ ಬೇಡಿಕೆಯು ಈಗ ಈಡೇರಿದಂತಾಗಿದೆ. ಹೊಸದಾಗಿ ಪ್ರಾರಂಭವಾಗಿರುವ ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್ (ಗಾಡಿ ಸಂಖ್ಯೆ ೧೬೫೯೫/೧೬೫೯೬) ಬೆಂಗಳೂರಿನಿಂದ ಉಡುಪಿ, ಕುಂದಾಪುರ ಮತ್ತು ಕಾರವಾರ ಗಳಿಗೆ ನೇರ ಸಂಪರ್ಕವನ್ನು ಒದಗಿಸುತ್ತದೆ. ಈ ರೈಲಿನ ವಿಶೇಷವೆಂದರೆ ಇದು ಮಂಗಳೂರು ನಗರಕ್ಕೆ ಪ್ರಯಾಣಿಸುವುದಿಲ್ಲ, ಇದರಿಂದಾಗಿ ಉಡುಪಿ ಮತ್ತು ಉತ್ತರ ಕನ್ನಡಕ್ಕೆ ಹೋಗುವ ಪ್ರಯಾಣಿಕರಿಗೆ ಸಮಯ ಉಳಿತಾಯವಾಗುತ್ತದೆ. ಈ ಹಿಂದೆ ಚಾಲ್ತಿಯಲ್ಲಿದ್ದ ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್ ಎರಡು ಗಂಟೆಗಳಷ್ಟು ನಿಧಾನವಾಗಿತ್ತು ಏಕೆಂದರೆ ಅದು ಮಂಗಳೂರು ಜಂಕ್ಷನ್‌ಗೆ ಹೋಗಿ ನಂತರ ಎಂಜಿನ್ ರಿವರ್ಸ್ ಮಾಡಿ ಮತ್ತೆ ಉಡುಪಿ-ಕಾರವಾರ ಕಡೆಗೆ ಪ್ರಯಾಣಿಸುತಿತ್ತು. ಹೊಸ ರೈಲಿನ ಚಾಲನೆಯಿಂದ ಈ ಹಿಂದಿನ ಬೆಂಗಳೂರು-ಕಾರವಾರ ರೈಲಿನ ಸಂಚಾರವನ್ನು ಸ್ಥಗಿತ ಮಾಡಲಾಗುತ್ತಿದೆ.
ಹೊಸ ಮಾರ್ಗದಲ್ಲಿ ರೈಲು ಮಂಗಳೂರು ಸಮೀಪದ ಪಡಿಲ್ ಜಂಕ್ಷನ್ ನಿಂದ ನೇರವಾಗಿ ಉಡುಪಿ ಕಡೆಗೆ ಪ್ರಯಾಣಿಸಲಿದೆ. ಹಾಗಾಗಿ ರೈಲು ಬೆಳಿಗ್ಗೆ ೮ ಗಂಟೆಯ ಬದಲು ಬೆಳಿಗ್ಗೆ ೪:೩೦ ಕ್ಕೆ ಉಡುಪಿಗೆ ತಲುಪಲಿದೆ. ಮತ್ತು ಬೆಳಿಗ್ಗೆ ೮:೨೫ ಕ್ಕೆ ಕಾರವಾರ ತಲುಪಲಿದೆ.
ಈ ಹಿಂದಿನ ಕಾರವಾರ ಎಕ್ಸ್ಪ್ರೆಸ್ ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಹೋಗುವ ರೈಲಿನೊಂದಿಗೆ ಜಂಟಿಯಾಗಿ ಮಂಗಳೂರು ತಲುಪುತಿತ್ತು . ನಂತರ ಮಂಗಳೂರಿನಲ್ಲಿ ಒಂದು ರೈಲು ದಕ್ಷಿಣಕ್ಕೆ ಕಣ್ಣೂರಿಗೆ ಮತ್ತು ಇನ್ನೊಂದು ರೈಲು ಉತ್ತರಕ್ಕೆ ಕಾರವಾರ ಕಡೆಗೆ ಹೋಗುತಿತ್ತು. ಇದು ಮಂಗಳೂರಿನಲ್ಲಿ ವಿಳಂಬಕ್ಕೆ ಕಾರಣವಾಗುತಿತ್ತು.
ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಮಂಗಳೂರು ಮೂಲಕ (ಕುನಿಗಲ್ ಮೂಲಕ ನಾಲ್ಕು ದಿನಗಳು ಮತ್ತು ಮೈಸೂರು ಮೂಲಕ ಮೂರು ದಿನಗಳು) 15 ಬೋಗಿಗಳ ಪರಿಷ್ಕೃತ ಸೆಟಪ್‌ನಲ್ಲಿ ಚಾಲನೆಯಾಗುವುದರಿಂದ ಮಂಗಳೂರಿಗೆ ರೈಲು ಸೇವೆ ಪರಿಣಾಮ ಬೀರುವುದಿಲ್ಲ. ಆದರೆ ಹೊಸ ಕಾರವಾರ ಎಕ್ಸ್ಪ್ರೆಸ್ ಚೆನ್ನರಾಯಪಟ್ಟಣ -ಸಕ್ಲೇಶಪುರ ಮಾರ್ಗವಾಗಿ ನೇರ ಉಡುಪಿ ಸೇರಲಿರುವುದರಿಂದ ಮಂಡ್ಯ ಮತ್ತು ಮೈಸೂರಿನಿಂದ, ಉಡುಪಿ ಮತ್ತು ಕಾರವಾರ ಗಳಿಗೆ ನೇರ ಸಂಪರ್ಕವು ಕಡಿತಗೊಳಿಸಿದಂತಾಗಿದೆ . ಈ ಕಾರಣ ಕೆಲವು ಜನರು ಹೊಸ ರೈಲು ವ್ಯವಸ್ಥೆಯನ್ನು ದೂರುತ್ತಿದ್ದಾರೆ. ಮಾತ್ರವಲ್ಲದೆ ಹೊಸ ರೈಲು ಮಂಗಳೂರು ಬರದೇ ಇರುವ ಕಾರಣ ಈ ರೈಲಿನ ಶೌಚಾಲಯದ ನೀರು ಟ್ಯಾಂಕುಗಳಲ್ಲಿ ನೀರು ತುಂಬಿಸುವುದು ಎಲ್ಲಿ ಎಂಬ ಪ್ರಶ್ನೆ ಉದ್ಭವವಾಗಿದೆ.
ಕೆಎಸ್‌ಆರ್ ಬೆಂಗಳೂರು ಇಲ್ಲಿಂದ ಸಂಜೆ ೬:೩೦ ಕ್ಕೆ ಹೊರಡುವ ಕಾರವಾರ ಎಕ್ಸ್ಪ್ರೆಸ್ ಯಶವಂತಪುರ , ಚಿಕ್ ಬನವರ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯರಸ್ತೆ , ಕಬಕಪುತ್ತೂರು, ಬಂಟವಾಳ, ಸುರತ್ಕಲ್,
ಮುಲ್ಕಿ, ಉಡುಪಿ, ಬಾರ್ಕೂರ್, ಕುಂದಾಪುರ, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ ಹಾಗು ಅಂಕೋಲಾ ನಿಲ್ದಾಣ ಗಳಿಂದ ಕಾರವಾರ ಬೆಳಗ್ಗೆ ೮:೨೫ ಕ್ಕೆ ಸೇರಲಿದೆ.
ಹಾಗು ಕಾರವಾರದಿಂದ ಹಿಂತಿರುಗುವ ರೈಲು ಸಂಜೆ ೬:೦೦ ಗಂಟೆಗೆ ಕಾರವಾರದಿಂದ ನಿರ್ಗಮಿಸಿ ಬೆಳಿಗ್ಗೆ ೮:೦೦ ಗಂಟೆಗೆ ಬೆಂಗಳೂರು ತಲುಪಲಿದೆ