ಗುರುವಾರ, ಜುಲೈ 9, 2020

ಶುಕ್ರವಾರ, ಮೇ 29, 2020

"ನೆನೆಪುಗಳ ನಗು" - - ಕವನ 20

ನೆನೆಪುಗಳ ನಗು


ನೀಲಾ ಮನದ ಬಾನಲಿ
ಹೊಳೆದಿವೆ ಕನಸುಗಳ ಮಿನುಗು...
ಪಾದದೆಡೆಗೆ ಹರಿದಿದೆ ಅಲೆಯು
ಎದೆಯಲ್ಲಾಗಿದೆ ಸಂಭ್ರಮದ ಸೊಬಗು...
ಕನಸುಗಳ ಸಾಗರದ ಕೊರೆತಕೆ
ಮಿಡಿಯಲಿ ಮನದಲಿ "ತುಸುನಗು"...

ಬಾಲ್ಯ-ಭವಿಷ್ಯಗಳ ಸೆರೆಯಲಿ
ಕೆಲ ನೆನೆಪುಗಳಿವೆ ನನಗೂ...
ನೆನೆದವೆಲ್ಲಾ ಸಿಗದಿರುವುದು ಇಲ್ಲಿ
ಇನ್ನೇಕೆ ಬೇಕು ಆ ಕೊರಗು...
ಇರುವ ನೆನಪುಗಳನ್ನೇ ಉಳಿಸಿ
ಮೂಡಲಿ ಆನಂದದ "ಕಿರುನಗು"...

ಮರಳಿ ಬರಬಹುದೇ ಆಕ್ಷಣಗಳು
ನೆನಪುಗಳು ನೆನೆಯದು ಜಡಿಮಳೆಗೂ...
ನಗುವೊಂದು ಅದ್ಬುತ ಸೃಷ್ಟಿಯು
ಸಿಗಲಾರದು ಕಾರಣವು ಕೊನೆಗೂ...
ಬಾಳನೌಕೆಯಲಿ ಎಲ್ಲವ ಮರೆತು
ಬಲವಾಗಲಿ ಜೀವನದಲಿ "ಮುಗುಳುನಗು"...

ಬುಧವಾರ, ಏಪ್ರಿಲ್ 15, 2020

"ಎನ್ನ ಕೊನೆದಿನ" - - ಕವನ 19



ಕಳೆದಿರುವೆನು ಮೂರುದಶಕಗಳ ಯಾನ,
ಇಂದು ಎಂಬುವುದ ಮರೆಸಿದೆ ಎನ ಅಜ್ಞಾನ,
ಕೊರಗಿಹುದು ಕನಸುಗಳು ತುಂಬಿರುವ ಈ ಮನ...
ಏನು ಮಾಡುವುದು ಈಕ್ಷಣ? "ಇದು ಎನ್ನ ಕೊನೆದಿನ"...

ದೇಶ-ವಿದೇಶ ಸುತ್ತಬೇಕಿನಿಸಿತು ಆದಿನ,
ಕೋಶ-ಭಾಷೆಗಳ ಓದಬೇಕಿತ್ತು ಪ್ರತಿದಿನ,
ಹಣವ ಬಯಸಿ ಕಳೆದುಹೋಯಿತು ಏನ ಜೀವನ...
ಉಳಿದಿರುವುದೇ ಸಮಯವು ಇನ್ನು? "ಇದು ಎನ್ನ ಕೊನೆದಿನ"...

ಕಲಿಯಬೇಕೆಂದಿದ್ದೆನು ಹಾಡಲು ಸುಮಧುರ ಗಾನ,
ನೀಡಬೇಕೆಂದಿದ್ದೆನು ಬಡವರಿಗೆ ಬಹು-ದಾನ,
ಬರಿ ಇದ ನೆನೆದೇ ಕಳೆದೆನು, ಬೆಳೆಸಲಿಲ್ಲ ಈಗುಣ...
ಇನ್ನಿರುವುದೇ ನನಗೆ ಈ ಋಣ? "ಇದು ಎನ್ನ ಕೊನೆದಿನ"...

ಸಾಯುವ ಮೊದಲು ಮಾಡಬೇಕಿತ್ತು ಒಳ್ಳೇದನ್ನ,
ಇದ ಕೊರಗುವ ಮುನ್ನ ಮಾಡು ನೆನೆದ ಕ್ಷಣ,
ಮತ್ತೊಮ್ಮೆ ಮರುಗಳಿಸದು ಈ ಕಣ ಜೀವನ...
ಯಾರರಿವರು ನಾಳೆವೆಂಬುವ ಪಯಣ? "ಇದು ಎನ್ನ ಕೊನೆದಿನ"...

ಸೋಮವಾರ, ಮಾರ್ಚ್ 30, 2020

"ಸಂಚಾರಿಯಾಗುವೆ" - ಕವನ 18



ರೆಕ್ಕೆಯ ಹರಡಿ ಗಗನದಿ ತೇಲೋ
ಹಕ್ಕಿಯಾಗ ಬೇಕೆನಿಸಿದೆ ...
ಜಗವ ನೋಡುವಾಸೆ ಮೂಡಿದೆ
ಕಾದು ಕುಳಿತಿಹೆ ಸರಿಸಮಯಕೆ ...

ಯಂತ್ರನಾಗಿ ದುಡಿಯೋ ಶರೀರ
ವಿರಾಮವನ್ನೀಗ ಕೋರಿದೆ ...
ಖುಷಿಯೇ ಇರದೆ ದುಡಿಮೆ ತಂದ
ಜಿಗುಪ್ಸೆ ತೊರೆಯಬೇಕಿದೆ ...

ದುಡಿಮೆ ಏಕೆ? ಪಯಣ ಬೇಕೇ?
ಗೊಂದಲವೀಗ ಶುರುವಾಗಿದೆ ...
ಮಡಿವ ಮುನ್ನ ಭುವಿಯ ಬಣ್ಣ
ಕಾಣಬೇಕಿದೆ ಇದ ಮರೆಯದೆ ...

ಇರುವುದೊಂದೇ ಜನುಮ ನಮಗೆ
ಕಳೆಯಬೇಕೆ ಬದುಕ ಸುಮ್ಮನೆ ?
ಸಂಚಾರಿಯಾಗುವೆ ಧರೆಯ ಲೋಕದಿ
ಸವಿಯಬೇಕಿದೆ ಕೆಲ ಕ್ಷಣಗಳೆ...

ಭಾನುವಾರ, ಮಾರ್ಚ್ 8, 2020

ಕರಾವಳಿಯಿಂದ ಬೆಂಗಳೂರಿಗೆ ಹೊಸ ರೈಲು- ಇನ್ನು ವಿಳಂಬದ ಮಾತೇ ಇಲ್ಲ


 Image result for 16595 bangalore karawar 

ಕರಾವಳಿ ಪ್ರದೇಶದ ಜನರ ದೀರ್ಘಕಾಲದ ಬೇಡಿಕೆಯು ಈಗ ಈಡೇರಿದಂತಾಗಿದೆ.  ಹೊಸದಾಗಿ ಪ್ರಾರಂಭವಾಗಿರುವ ಬೆಂಗಳೂರು-ಕಾರವಾರ  ಎಕ್ಸ್ಪ್ರೆಸ್ (ಗಾಡಿ ಸಂಖ್ಯೆ ೧೬೫೯೫/೧೬೫೯೬) ಬೆಂಗಳೂರಿನಿಂದ ಉಡುಪಿ, ಕುಂದಾಪುರ ಮತ್ತು ಕಾರವಾರ ಗಳಿಗೆ  ನೇರ ಸಂಪರ್ಕವನ್ನು ಒದಗಿಸುತ್ತದೆ. ಈ ರೈಲಿನ ವಿಶೇಷವೆಂದರೆ ಇದು ಮಂಗಳೂರು ನಗರಕ್ಕೆ ಪ್ರಯಾಣಿಸುವುದಿಲ್ಲ, ಇದರಿಂದಾಗಿ ಉಡುಪಿ ಮತ್ತು ಉತ್ತರ ಕನ್ನಡಕ್ಕೆ ಹೋಗುವ ಪ್ರಯಾಣಿಕರಿಗೆ ಸಮಯ ಉಳಿತಾಯವಾಗುತ್ತದೆ. ಈ ಹಿಂದೆ ಚಾಲ್ತಿಯಲ್ಲಿದ್ದ ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್ ಎರಡು ಗಂಟೆಗಳಷ್ಟು ನಿಧಾನವಾಗಿತ್ತು ಏಕೆಂದರೆ ಅದು ಮಂಗಳೂರು ಜಂಕ್ಷನ್‌ಗೆ ಹೋಗಿ ನಂತರ ಎಂಜಿನ್ ರಿವರ್ಸ್ ಮಾಡಿ ಮತ್ತೆ ಉಡುಪಿ-ಕಾರವಾರ ಕಡೆಗೆ ಪ್ರಯಾಣಿಸುತಿತ್ತು. ಹೊಸ ರೈಲಿನ ಚಾಲನೆಯಿಂದ ಈ ಹಿಂದಿನ ಬೆಂಗಳೂರು-ಕಾರವಾರ ರೈಲಿನ ಸಂಚಾರವನ್ನು ಸ್ಥಗಿತ ಮಾಡಲಾಗುತ್ತಿದೆ.  

ಹೊಸ ಮಾರ್ಗದಲ್ಲಿ ರೈಲು ಮಂಗಳೂರು ಸಮೀಪದ ಪಡಿಲ್ ಜಂಕ್ಷನ್ ನಿಂದ ನೇರವಾಗಿ ಉಡುಪಿ ಕಡೆಗೆ ಪ್ರಯಾಣಿಸಲಿದೆ. ಹಾಗಾಗಿ  ರೈಲು ಬೆಳಿಗ್ಗೆಗಂಟೆಯ ಬದಲು ಬೆಳಿಗ್ಗೆ ೪:೩೦ ಕ್ಕೆ ಉಡುಪಿಗೆ ತಲುಪಲಿದೆ. ಮತ್ತು ಬೆಳಿಗ್ಗೆ ೮:೨೫ ಕ್ಕೆ ಕಾರವಾರ ತಲುಪಲಿದೆ. 

ಈ ಹಿಂದಿನ ಕಾರವಾರ ಎಕ್ಸ್ಪ್ರೆಸ್ ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಹೋಗುವ ರೈಲಿನೊಂದಿಗೆ ಜಂಟಿಯಾಗಿ ಮಂಗಳೂರು ತಲುಪುತಿತ್ತು . ನಂತರ  ಮಂಗಳೂರಿನಲ್ಲಿ ಒಂದು ರೈಲು ದಕ್ಷಿಣಕ್ಕೆ ಕಣ್ಣೂರಿಗೆ ಮತ್ತು ಇನ್ನೊಂದು ರೈಲು ಉತ್ತರಕ್ಕೆ ಕಾರವಾರ ಕಡೆಗೆ ಹೋಗುತಿತ್ತು. ಇದು ಮಂಗಳೂರಿನಲ್ಲಿ ವಿಳಂಬಕ್ಕೆ ಕಾರಣವಾಗುತಿತ್ತು.

ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಮಂಗಳೂರು ಮೂಲಕ (ಕುನಿಗಲ್ ಮೂಲಕ ನಾಲ್ಕು ದಿನಗಳು ಮತ್ತು ಮೈಸೂರು ಮೂಲಕ ಮೂರು ದಿನಗಳು) 15 ಬೋಗಿಗಳ ಪರಿಷ್ಕೃತ ಸೆಟಪ್‌ನಲ್ಲಿ ಚಾಲನೆಯಾಗುವುದರಿಂದ ಮಂಗಳೂರಿಗೆ ರೈಲು ಸೇವೆ ಪರಿಣಾಮ ಬೀರುವುದಿಲ್ಲ. ಆದರೆ ಹೊಸ ಕಾರವಾರ ಎಕ್ಸ್ಪ್ರೆಸ್ ಚೆನ್ನರಾಯಪಟ್ಟಣ -ಸಕ್ಲೇಶಪುರ ಮಾರ್ಗವಾಗಿ ನೇರ ಉಡುಪಿ  ಸೇರಲಿರುವುದರಿಂದ ಮಂಡ್ಯ ಮತ್ತು ಮೈಸೂರಿನಿಂದ, ಉಡುಪಿ ಮತ್ತು ಕಾರವಾರ ಗಳಿಗೆ  ನೇರ ಸಂಪರ್ಕವು ಕಡಿತಗೊಳಿಸಿದಂತಾಗಿದೆ . ಈ ಕಾರಣ ಕೆಲವು ಜನರು  ಹೊಸ ರೈಲು ವ್ಯವಸ್ಥೆಯನ್ನು ದೂರುತ್ತಿದ್ದಾರೆ. ಮಾತ್ರವಲ್ಲದೆ ಹೊಸ ರೈಲು ಮಂಗಳೂರು ಬರದೇ ಇರುವ ಕಾರಣ ಈ ರೈಲಿನ ಶೌಚಾಲಯದ ನೀರು ಟ್ಯಾಂಕುಗಳಲ್ಲಿ ನೀರು ತುಂಬಿಸುವುದು ಎಲ್ಲಿ ಎಂಬ ಪ್ರಶ್ನೆ ಉದ್ಭವವಾಗಿದೆ. 

ಕೆಎಸ್‌ಆರ್ ಬೆಂಗಳೂರು ಇಲ್ಲಿಂದ ಸಂಜೆ ೬:೩೦ ಕ್ಕೆ ಹೊರಡುವ ಕಾರವಾರ ಎಕ್ಸ್ಪ್ರೆಸ್ ಯಶವಂತಪುರ , ಚಿಕ್ ಬನವರ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯರಸ್ತೆ , ಕಬಕಪುತ್ತೂರು, ಬಂಟವಾಳ, ಸುರತ್ಕಲ್,
ಮುಲ್ಕಿ, ಉಡುಪಿ, ಬಾರ್ಕೂರ್, ಕುಂದಾಪುರ, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ ಹಾಗು  ಅಂಕೋಲಾ ನಿಲ್ದಾಣ ಗಳಿಂದ ಕಾರವಾರ ಬೆಳಗ್ಗೆ ೮:೨೫ ಕ್ಕೆ  ಸೇರಲಿದೆ. 

ಹಾಗು ಕಾರವಾರದಿಂದ ಹಿಂತಿರುಗುವ ರೈಲು ಸಂಜೆ ೬:೦೦ ಗಂಟೆಗೆ ಕಾರವಾರದಿಂದ ನಿರ್ಗಮಿಸಿ  ಬೆಳಿಗ್ಗೆ ೮:೦೦ ಗಂಟೆಗೆ ಬೆಂಗಳೂರು ತಲುಪಲಿದೆ

ಗುರುವಾರ, ಫೆಬ್ರವರಿ 13, 2020

"ಕಡಲ ಅಲೆಗಳ ಜೊತೆಗೆ" - ಕವನ 17




ಸೂರ್ಯನು ಉಗುಳುತ್ತಿರುವ ಹಾಗೆ, ಮೂಡಿದೆ ಅಲೆಗಳ ಸಾಲೆ ...
ಮೂಡಿದನು ಮೂಡಣದ ರವಿಯು, ಕಡಲ ಅಡಿಯಿಂದ ಮೇಲೆ...
ಮೋಡಗಳು ಮರೆಮಾಡ ಹೊರಟಿವೆ, ಅವನ ದುಂಡಾಕಾರದ ನಗೆ...
ಕೆಂಪಾಗಿ ಕಂಡಿದೆ ಬಾನು, ಈ ಮುಂಜಾನೆಯಾ ಸವಿಗಂಪಿಗೆ...

ಹೆಜ್ಜೆಗಳ ಮಾದರಿ ಕೇಳಿದೆ, ನಿರಂತರ ಅಲೆಗಳ ಕೊರೆತ...
ಏಡಿಗಳು ಉರುಳಿವೆ ಸಾಗರಕೆ, ಅಲೆಗಳ ಹಿಂದೆ ಆಲಿಸುತ...
ಮೀನುಗಳು ಮರೆಯಾಗಿದೆ ಬೆದರಿ, ಕಾಗೆಯು ಅವುಗಳ ಹೊಂಚಿಸುತ...
ಮೈಮರೆತರು ಕಂಡು ನೋಡಿಗರು, ಈ ವಿಸ್ಮಯವ ಸವಿಯುತ...

ಹಕ್ಕಿಗಳು ಹಾರಿವೆ ಎತ್ತರದಿ, ಅವನ ಕಾಣುವ ತವಕಕೆ..
ದೋಣಿಗಳು ದೂರದಿ ಸಾಗಿದೆ, ಕಡಲಿನ ಅಂಚಿನ ಕಡೆಗೆ...
ಹೃದಯವು ಕಂಡು ಹಗುರವಾಗಿದೆ, ಕಡಲ ರಮಣೀಯ ದೃಶ್ಯಕೆ...
ಸಾಲದು ವರ್ಣಿಸಲು ಪದಗಳೇ, ಈ ಯಕ್ಷಸೃಷ್ಟಿಯ ಬೆರಗಿಗೆ...

ಶನಿವಾರ, ಜುಲೈ 27, 2019

ಮಲೆನಾಡು "ಮಲೆಗಳಿಲ್ಲದ ನಾಡು" - ನಿಖರ ಮಾತು 4



ನಾನು ನನ್ನ ಬಾಲ್ಯದ ದಿನಗಳನೊಮ್ಮೆ ನೆನೆದುಕೊಂಡರೆ ನೆನಪಾಗುವುದು ನಮ್ಮನೆಯ ಸುತ್ತಮುತ್ತಲಿನ ಹಸಿರು ಹಸಿರಾದ ಗಿಡಮರಬಳ್ಳಿಗಳು, ಹಲವಾರು ಪ್ರಾಣಿ-ಪಕ್ಷಿಗಳ ಕೂಗು, ವಿಧವಿಧವಾದ ಹಾವುಗಳು ಮತ್ತು ಚಿಟ್ಟೆಗಳು. ಮನೆಯ ಒಳಗೆ ಕೂಡ ಹಲವಾರು ಬಾರಿ ಹಾವುಗಳು ನುಸುಳಿ ಬಂದದುಂಟು. ಹವಾಮಾನಗಳ ಸನ್ನಿವೇಶಗಳು ಮಲೆನಾಡಿನಲ್ಲಿ ಬೇರೆಯೇ ಅನುಭವಗಳನ್ನು ಸೃಷ್ಟಿಮಾಡುತ್ತಿದ್ದವು. ಮಲೆನಾಡಿನಲ್ಲಿ ಬೇಸಿಗೆ ಎಂಬುದು ಅಷ್ಟೊಂದು ವ್ಯತ್ಯಾಸ ತರುತ್ತಿರಲಿಲ್ಲ. ಮಧ್ಯಾಹ್ನದ ಸಮಯಕ್ಕೆ ಹೆಚ್ಚು ಬಿಸಿಲಿದ್ದರೂ ಸೆಕೆಯಾಗುವ ಸನ್ನಿವೇಶವೇ ಇರಲಿಲ್ಲ. ಸಂಜೆ ವೇಳೆಗೆ ತಂಪಾಗಿ, ಚಳಿಗಾಲದ ಹವಾಮಾನ ಬಂದುಬಿಡುತ್ತಿತ್ತು. ವಿದ್ಯುತ್ ಕಾಣದಿರುವ ನಾವು ಸೀಮೆಎಣ್ಣೆಯ ದೀಪದಿಂದಲೇ ನಮ್ಮ ಪ್ರತಿರಾತ್ರಿಯನ್ನು ಸಾಗುತಿದ್ದೆವು.

ಮಳೆಗಾಲವಂತು ಹೇಳುವುದೆ ಬೇಡ! ಮಳೆಯ ಆ ರಭಸವು ನಮ್ಮನ್ನು ಕುಳಿತ ಜಾಗದಿಂದ ಏಳದಂತೆ ಜಡವಿಡಿಸಿಬಿಡುತ್ತಿತ್ತು. ಒಂದುವೇಳೆ ಮನೆಯಿಂದ ಹೊರಗೆ ಹೋದರೆ, ಬರುವಾಗ ಕಾಲುಗಳನ್ನೊಮ್ಮೆ ಆಳವಾಗಿ ನೋಡಿಕೊಳ್ಳಬೇಕಾಗಿತ್ತು ಅಷ್ಟೊಂದು "ಜಿಗಣೆ"ಗಳ ಹಾವಳಿ. ಒಲೆಯ ಬದಿ ಚಳಿಕಾಯಿಸಲು ಕುಳಿತರೆ ಏಳುವ ಜಾಯಮಾನವೇ ಇಲ್ಲ. ಬೆಚ್ಚಗೆ ಕಾಫಿ ಕುಡಿದು ಹಲಸಿನ ಬೀಜವನ್ನು ಒಲೆಯಲ್ಲೆ ಸುಟ್ಟು ತಿನ್ನುವ ಮಜಾವೇ ಬೇರೆಯಾಗಿತ್ತು. ಇಂತಹ ಪ್ರಸಂಗಗಳು ಮಲೆನಾಡಿನಲ್ಲೇ ಅನುಭವಿಸಲು ಸಿಗುವುದು. ಮಳೆಗಾಲ ಮುಗಿದರೆ ಸಾಕು, ನಂತರ ಚಳಿಗಾಲದ ಹಾವಳಿ. ಎಷ್ಟು ಸ್ನಾನ ಮಾಡಿದರೂ, ನೀರಿನ ಅಂಡೆ ಕಾಲಿಯಾಗುವವರೆಗೆ ಸ್ನಾನ ಮಾಡಬೇಕೆನಿಸುತ್ತಿತ್ತು. ನಿಜವಾಗಿಯೂ ಹೇಳಬೇಕೆಂದರೆ, ಮಲೆನಾಡಿನಲ್ಲಿ ಮಳೆಗಾಲ ಮತ್ತು ಚಳಿಗಾಲಗಳೇ ಪೂರ್ತಿ ವರ್ಷ ನಡಿಯುತ್ತಿತ್ತು.

ಇವು ಈಗ ಬರಿ ನೆನಪುಗಳಾಗಿಯೇ ಉಳಿದಿರುವುದು ಮಾತ್ರ. ಈಗಿನ ಮುಂದುವರಿಕೆಯೋ, ತಂತ್ರಜ್ಞಾನದ ಬೆಳವಣಿಗೆಯೋ, ಇಲ್ಲವೆ ದುರಾಸೆಯೋ ಮಲೆನಾಡಿದಲ್ಲಿ ಮಲೆಗಳ ನಾಶವು ಹೆಚ್ಚಾಗಿದ್ದು ಪೂರ್ಣವಾಗಿ ಹವಾಮಾನದಲ್ಲಿ ಬದಲಾವಣೆಯನ್ನು ತಂದಿದೆ. ಹಿರಿಯರು ಅಂದಾಜಿಸುತಿದ್ದ ಹವಾಮಾನಗಳ ಅವಧಿ ಈಗ ಅಂದಾಜು ಮಾಡಲಾಗದಷ್ಟು ಆಳವಾಗಿ ಹೋಗಿಬಿಟ್ಟಿವೆ. ಯಾವಾಗ ಮಳೆ ಬರುವುದೋ, ಚಳಿಗಾಲ ಇರುವುದೇ, ಯಾವಾಗ ಶುರು ಅಥವಾ ಅಂತ್ಯವೆಂಬುದು ತಿಳಿಯದಂತಾಗಿದೆ. ಮಲೆಗಳಿಲ್ಲದೆ ಮುಂದೊಮ್ಮೆ ಮಲೆನಾಡು "ಮಲೆಗಳಿಲ್ಲದ ನಾಡು" ಆಗುವದು ಎಂಬ ಭಾಸವಾಗುತ್ತಿದೆ.

ಸರಿಸುಮಾರು ಐದಾರು ವರ್ಷಗಳ ಹಿಂದಿನಿಂದ (ಅಂದಾಜು ೨೦೦೨ - ೨೦೦೩) ಮಲೆನಾಡಿನ ಪ್ರತಿಯೊಂದು ಮನೆಯಲ್ಲಿಯೂ ಕೂಡ ಗಾಳಿಯಂತ್ರ (ಫ್ಯಾನ್)ಗಳ ಬಳಕೆ ಹೆಚ್ಚಾಗುತ್ತಿದೆ. ನಮ್ಮ ಮನೆಯ ಬಗ್ಗೆಯೇ  ಹೇಳಬೇಕೆಂದರೆ, ಬೇಸಿಗೆಗಾಲಕ್ಕೂ ಹೊದಿಕೆ ಹಾಕಿ ಮಲಗುತಿದ್ದವರು ಈಗ ಗಾಳಿಯಂತ್ರಗಳಿಲ್ಲದೆ ಮಲಗುವುದು ಕಷ್ಟವಾಗಿಬಿಟ್ಟಿದೆ. ಹಾಲು, ತರಕಾರಿಗಳು ಹಲವಾರು ದಿನಗಳವರೆಗೆ ಇಡಬಹುದಾದ ಊರಿನಲ್ಲೇ ಶೀತಲೀಕರಣ ಯಂತ್ರ(ಫ್ರಿಡ್ಜ್)ದ ಅವಶ್ಯಕತೆ ಬಂದುಬಿಟ್ಟಿದೆ. ತಾಪಮಾನ ಹೆಚ್ಚಿದೆ, ಮಳೆ ಸಮಯಕ್ಕೆ ಬರುತಿಲ್ಲ, ಚಳಿಗಾಲವಂತು ತಿಳಿಯುತ್ತಲೇ ಇಲ್ಲ.

ಮಾನವನೆಂಬುದು ಈ ಭೂಮಿಯ ಒಂದು ಜೀವಿಯಾದರೂ, ಭೂಮಿಯನ್ನೇ ನಾಶ ಮಾಡುವ ದುರ್ಗುಣ ನಮ್ಮಲ್ಲಿ ಮಾತ್ರ ಇರುವುದು. ಹೆಚ್ಚು ಬುದ್ದಿವಂತಿಕೆ ಸ್ವಯಂ ನಾಶಕ್ಕೆ ಕಾರಣವಾಗುವ ಮಾತು ಇಲ್ಲಿ ವಾಸ್ತವಕ್ಕೆ ಬರುತ್ತಿದೆ. ಇವೆಲ್ಲವು ಪ್ರಕೃತಿ ವಿಕೋಪಕ್ಕೆ ಕಾರಣವಾಗಿ ಮುಂದೊಮ್ಮೆ ಮನುಕುಲವೆಂಬುದೇ ಅಳಿಸಿಹೋಗುವುದಂತು ನಿಜ. ಈಗಲೂ ಸಮಯ ಮಿಂಚಿಲ್ಲ, ಪ್ರತಿಯೊಬ್ಬರು ಮರ ನೆಡುವ ಮೂಲಕ, ಪರಿಸರ ಮಾಲಿನ್ಯ ನಿಯಂತ್ರಣ ಮಾಡುವ ಮೂಲಕ ಮತ್ತೊಮ್ಮೆ ಈ ಭುವಿಯನ್ನು ಹಸಿರಾಗಿಸಬಹುದು. ಇದು ನನ್ನದೋ ಅಥವಾ ಬರಿ ನಿನ್ನದೋ ಭುವಿಯಲ್ಲ, ನಮ್ಮೆಲ್ಲರ ಭುವಿ. ಪ್ರತಿಯೊಬ್ಬರ ಖಾಳಜಿಯು ಇಲ್ಲಿ ಅತಿಅವಶ್ಯಕ.